ಆಬಾಲವೃದ್ಧಾದಿಯಾಗಿ ಇಷ್ಟಪಟ್ಟು ತಿನ್ನುವ ಹಣ್ಣೇ ಸೀತಾಫಲ. ಇದನ್ನು ಹಿಂದಿಯಲ್ಲಿ ಶರೀಫಾ ಎನ್ನುತ್ತಾರೆ. ಇಂದು ವ್ಯಾಪಾರಕ್ಕೋಸ್ಕರ ಬೆಲೆಯಲಾಗುವ ಈ ಮರ ಒಂದು ಕಾಲದಲ್ಲಿ ಪ್ರತಿ ಮನೆಯಲ್ಲಿ ಒಂದೆರಡು ಗಿಡಗಳಾದರೂ ಸಿಗುತ್ತಿತ್ತು. ಇದನ್ನು ಹಣ್ಣಿನ ಸೇವನೆಗೋಸ್ಕರ ಮಾತ್ರವಲ್ಲದೆ ಇದರ ಗಿಡದಲ್ಲಿಯೂ ಅನೇಕ ಔಷಧೀಯ ಗುಣಗಳು ಅಡಕವಾಗಿರುವುದರಿಂದ ಮನೆ ಮದ್ದಿನಲ್ಲಿಯೂ ಉಪಯೋಗಿಸಲಾಗುತ್ತಿತ್ತು. ಈ ಹಣ್ಣು ಅತ್ಯಧಿಕ ಸಿ ಜೀವಸತ್ವ ಹೊಂದಿದ್ದು ಪೊಟ್ಯಾಷಿಯಂ, ಮೆಗ್ನೀಷಿಯಂ, ಕ್ಯಾಲ್ಸಿಯಂ, ಫೈಬರ್, ವಿಟಮಿನ್ ಬಿ -6 ಇರುವುದರಿಂದ ಇಡೀ ದೇಹಕ್ಕೆ ಚೈತನ್ಯ ನೀಡುತ್ತದೆ.
ಹಣ್ಣನ್ನು ಸೇವಿಸುವುದರಿಂದ ಮೂಳೆಗಳಿಗೆ ಶಕ್ತಿ ತುಂಬುತ್ತದೆ. ಹಣ್ಣಿನ ಸೇವನೆ ಚರ್ಮಕ್ಕೆ ಕಾಂತಿ ನೀಡುತ್ತದೆ.
ಸೀತಾಫಲದ ಎಲೆಗಳ ಕಷಾಯ ಸೇವನೆ ಮಧುಮೇಹಕ್ಕೆ ಔಷದಿಯಾಗಬಲ್ಲದು.
ಗಿಡದ ಚಕ್ಕೆಯ ಕಷಾಯಸೇವನೆ ಕೆಮ್ಮು ನಿವಾರಿಸುತ್ತದೆ. ಹಣ್ಣಿನ ಸೇವನೆ ರಕ್ತದೊತ್ತಡ ನಿಯಂತ್ರಣದಲ್ಲಿಡಲು ಸಹಾಯಕ.
ಹುಳುಕಡ್ಡಿ ಗಾಯಕ್ಕೆ ಸೀತಾಫಲದ ಎಲೆಗಳನ್ನು ಅರೆದು ರಸ ಹಿಂಡಿದರೆ ಹುಳುಗಳು ನಾಶವಾಗಿ ಗಾಯ ವಾಸಿಯಾಗುತ್ತದೆ.
ಹಣ್ಣಿನ ಸೇವನೆ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುವುದಲ್ಲದೆ ಕೂದಲು ಕಾಂತಿಯುತ ವಾಗಿ ಬೆಳೆಯುತ್ತದೆ.
ಕಣ್ಣುಗಳ ಕಾಂತಿಗೂ ಈಹಣ್ಣಿನ ಸೇವನೆ ಉಪಕಾರಿ.
ಮಕ್ಕಳಿಗೆ ಈ ಹಣ್ಣು ತಿನ್ನಿಸುವುದರಿಂದ ಮಕ್ಕಳ ಮೆದುಳಿನ ಬೆಳವಣಿಗೆಗೆ ಉಪಕಾರಿ.
ಸೀತಾಫಲ ಬೀಜಗಳ ಸಿಪ್ಪೆ ತೆಗೆದು ತಿರುಳನ್ನು ಕುರಿ ಹಾಲಿನಲ್ಲಿ ಅರೆದು ತಲೆಗೆ ಹಚ್ಚುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ.
ಹಣ್ಣನ್ನು ನಿಯಮಿತವಾದ ಸೇವನೆ ಮಾಡುವುದರಿಂದ ಜೀರ್ಣ ಕ್ರೀಯೆ ಸುಗಮವಾಗುತ್ತದೆ.
ಸೀತಾಫಲದ ಎಲೆಗಳನ್ನು ನುಣ್ಣಗೆ ಅರೆದು ಕುರುವಿಗೆ ಹಚ್ಚಿದರೆ ಕುರು ಬಹುಬೇಗ ಸೋರಿ ಹೋಗುತ್ತದೆ.
ಸೀತಾಫಲದ ಎಲೆಗಳನ್ನು ಸುಟ್ಟು ಅದರ ಬೂದಿಯನ್ನು ಗಾಯಕ್ಕೆ ಹಚ್ಚಿದರೆ ಗಾಯ ಒಣಗಿ ಅದರ ಕಲೆ ಬಹುಬೇಗ ವಾಸಿಯಾಗುತ್ತದೆ.
ಹಣ್ಣಿನ ನಿಯಮಿತ ಸೇವನೆಯಿಂದ ಮಲಬದ್ದತೆ ಕಡಿಮೆಯಾಗುತ್ತದೆ.

































