ಭಾರತದ ಸಂಸ್ಕೃತಿ, ಪರಂಪರೆ ಮತ್ತು ಋತುಚಕ್ರದೊಂದಿಗೆ ನೇರವಾಗಿ ಸಂಪರ್ಕ ಹೊಂದಿರುವ ಪ್ರಮುಖ ಹಬ್ಬಗಳಲ್ಲಿ ಮಕರ ಸಂಕ್ರಾಂತಿ ಅತ್ಯಂತ ಮಹತ್ವದ್ದಾಗಿದೆ. ಪ್ರತಿವರ್ಷ ಜನವರಿ 14 ಅಥವಾ 15ರಂದು ಆಚರಿಸಲ್ಪಡುವ ಈ ಹಬ್ಬವು ಸೂರ್ಯನು ಮಕರ ರಾಶಿಗೆ ಪ್ರವೇಶಿಸುವುದನ್ನು ಸೂಚಿಸುತ್ತದೆ.
ಇದು ಖಗೋಳಶಾಸ್ತ್ರೀಯ ಮಹತ್ವ ಹೊಂದಿರುವ ಏಕೈಕ ಭಾರತೀಯ ಹಬ್ಬವಾಗಿದ್ದು, ಸೂರ್ಯನ ಉತ್ತರಾಯಣ ಆರಂಭದ ಸಂಕೇತವೂ ಆಗಿದೆ.ಸಂಕ್ರಾಂತಿ ಹಬ್ಬವು ಮುಖ್ಯವಾಗಿ ಕೃಷಿಕರ ಹಬ್ಬವಾಗಿದೆ. ಬೆಳೆ ಕಟಾವು ಮುಗಿದು ಹೊಸ ಧಾನ್ಯ ಮನೆಗೆ ಬರುತ್ತಿರುವ ಸಂತಸದ ಸಮಯ ಇದಾಗಿದೆ. ಪ್ರಕೃತಿಗೆ ಕೃತಜ್ಞತೆ ಸಲ್ಲಿಸುವ ದಿನವೆಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ರೈತರು ತಮ್ಮ ಪರಿಶ್ರಮದ ಫಲವನ್ನು ಸಂಭ್ರಮದಿಂದ ಸ್ವಾಗತಿಸುತ್ತಾರೆ.
ಕರ್ನಾಟಕದಲ್ಲಿ ಸಂಕ್ರಾಂತಿಯನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆ. ಎಳ್ಳು-ಬೆಲ್ಲ ಹಂಚುವ ಸಂಪ್ರದಾಯ ಈ ಹಬ್ಬದ ವಿಶೇಷತೆ. “ಎಳ್ಳು-ಬೆಲ್ಲ ತಿಂದು ಒಳ್ಳೆಯದನ್ನೇ ಮಾತನಾಡಿ” ಎಂಬ ಸಂದೇಶದ ಮೂಲಕ ಪರಸ್ಪರ ಸೌಹಾರ್ದತೆ ಮತ್ತು ಸಿಹಿ ಸಂಬಂಧಗಳ ಮಹತ್ವವನ್ನು ಸಾರಲಾಗುತ್ತದೆ. ಮಹಿಳೆಯರು ಹೊಸ ಬಟ್ಟೆ ಧರಿಸಿ, ಬಣ್ಣಬಣ್ಣದ ತಟ್ಟೆಗಳಲ್ಲಿ ಎಳ್ಳು, ಬೆಲ್ಲ, ಕಡಲೆಕಾಯಿ, ತೆಂಗಿನಕಾಯಿ, ಕಬ್ಬು ಹಂಚಿಕೊಳ್ಳುತ್ತಾರೆ. ಮನೆ ಮುಂದೆ ರಂಗೋಲಿ, ಎತ್ತುಗಳಿಗೆ ಅಲಂಕಾರ, ವಿಶೇಷ ಪೂಜೆಗಳು ನಡೆಯುತ್ತವೆ.ಭಾರತದ ವಿವಿಧ ಭಾಗಗಳಲ್ಲಿ ಸಂಕ್ರಾಂತಿಯನ್ನು ವಿಭಿನ್ನ ಹೆಸರುಗಳೊಂದಿಗೆ ಆಚರಿಸಲಾಗುತ್ತದೆ.ತಮಿಳುನಾಡಿನಲ್ಲಿ `ಪೊಂಗಲ್’ ಹೊಸ ವರ್ಷದ ಹಬ್ಬವಾಗಿ ಆಚರಿಸಲಾಗುತ್ತದೆ.
ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ `ಸಂಕ್ರಾಂತಿ’ ದೊಡ್ಡ ಕುಟುಂಬ ಹಬ್ಬವಾಗಿದೆ. ಮಹಾರಾಷ್ಟ್ರದಲ್ಲಿ ಸಂಕ್ರಾಂತಿ ಹಬ್ಬದಲ್ಲಿ`ತಿಳಗುಳ’ ಹಂಚುವ ಪದ್ಧತಿ ಇದೆ. ಪಂಜಾಬ್ನಲ್ಲಿ (ಮ್ಯಾಘಿ) ಲೋಹ್ರಿ ಬೆಂಕಿಯ ಸುತ್ತ ನೃತ್ಯ ಮತ್ತು ಹಾಡುಗಳೊಂದಿಗೆ ಸಂಭ್ರಮಿಸ ಲಾಗುತ್ತಿದೆ. ರಾಜಸ್ಥಾನ ಗುಜರಾತಿನಲ್ಲಿ (ಉತ್ತರಾಯಣ) ಗಾಳಿಪಟ ಹಾರಿಸುವ ಉತ್ಸವ ವಿಶ್ವವಿಖ್ಯಾತ ವಾಗಿದೆ.
ಅಸ್ಸಾಂನಲ್ಲಿ ಮಾಘ ಬಿಹು, ಕಾಶ್ಮೀರದಲ್ಲಿ ,’ಶಿಶುರ ಸೇಕ್ರಾಂತ ‘ಶಬರಿಮಲೆ ಬೆಟ್ಟದಲ್ಲಿ ‘ಮಕರ ವಿಲಕ್ಕೂ’ ಎಂದು ಭಾರತಾದ್ಯಂತ ಸಂಕ್ರಾಂತಿ ಹಬ್ಬ ಆಚರಿಸಲಾಗುತ್ತದೆ. ಈ ಹಬ್ಬದ ಮೊದಲನೇ ದಿನ ಭೋಗಿ ಮಾರನೇ ದಿನ ಕರಿ ಎಂದು ಹೇಳಲಾಗುತ್ತದೆ.ಭಾರತೀಯ ಹಬ್ಬಗಳು ಕೇವಲ ಸಂಭ್ರಮದ ಆಚರಣೆಗಳಲ್ಲ, ಅವು ಜೀವನದ ಆಂತರಿಕ ಅರ್ಥವನ್ನು ತಿಳಿಸುವ ಆಧ್ಯಾತ್ಮಿಕ ಸಂದೇಶಗಳ ಸಂಕೇತಗಳು. ಅಂತಹ ಹಬ್ಬಗಳಲ್ಲಿ ಮಕರ ಸಂಕ್ರಾಂತಿ ವಿಶೇಷ ಸ್ಥಾನವನ್ನು ಹೊಂದಿದೆ. ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ಈ ಪವಿತ್ರ ಕ್ಷಣವು ಪ್ರಕೃತಿಯಲ್ಲಿ ಮಾತ್ರವಲ್ಲ, ಮಾನವನಲ್ಲಿಯೂ ಹೊಸ ಬೆಳಕನ್ನು ಉಂಟುಮಾಡುವ ಕಾಲವಾಗಿದೆ.
ಸಂಕ್ರಾಂತಿಯಲ್ಲಿ ಸೂರ್ಯ ಉತ್ತರಾಯಣಕ್ಕೆ ತಿರುಗುತ್ತಾನೆ. ಇದು ಕತ್ತಲೆಯಿಂದ ಬೆಳಕಿನತ್ತ ಸಾಗುವ ಸಂಕೇತ. ಆಧ್ಯಾತ್ಮಿಕ ದೃಷ್ಟಿಯಿಂದ ಇದು ಅಜ್ಞಾನದಿಂದ ಜ್ಞಾನದತ್ತ, ನಿರಾಶೆಯಿಂದ ಆಶೆಯತ್ತ, ದುಃಖದಿಂದ ಶಾಂತಿಯತ್ತ ನಡೆಯುವ ಪಯಣವನ್ನು ಸೂಚಿಸುತ್ತದೆ. ಸೂರ್ಯನಂತೆ ನಮ್ಮ ಅಂತರಂಗವೂ ಪ್ರಕಾಶಮಾನವಾಗಬೇಕು ಎಂಬ ಸಂದೇಶವನ್ನು ಸಂಕ್ರಾಂತಿ ನೀಡುತ್ತದೆ.ಸಂಕ್ರಾಂತಿಯ ಅವಿಭಾಜ್ಯ ಭಾಗವಾದ ಎಳ್ಳು ಬೆಲ್ಲ ಕೇವಲ ತಿನಿಸಲ್ಲ, ಅದು ಜೀವನದ ತತ್ತ್ವ. ಎಳ್ಳು ಜೀವನದ ಕಠಿಣತೆಗಳನ್ನು, ಬೆಲ್ಲ ಜೀವನದಲ್ಲಿನ ಸಿಹಿತನವನ್ನು ಪ್ರತಿನಿಧಿಸುತ್ತದೆ. ಎರಡನ್ನೂ ಒಟ್ಟಿಗೆ ಸ್ವೀಕರಿಸುವಂತೆ, ಜೀವನದಲ್ಲಿ ಸುಖದುಃಖ ಎರಡನ್ನೂ ಸಮಚಿತ್ತದಿಂದ ಸ್ವೀಕರಿಸುವ ಮನೋಭಾವವನ್ನು ಇದು ಕಲಿಸುತ್ತದೆ. “ಒಳ್ಳೆಯದನ್ನೇ ಮಾತನಾಡಿ” ಎಂಬ ಸಂದೇಶ ಆತ್ಮಶುದ್ಧಿಗೆ ದಾರಿ ಮಾಡಿಕೊಡುತ್ತದೆ.ಸಂಕ್ರಾಂತಿಯ ದಿನ ದಾನಕ್ಕೆ ವಿಶೇಷ ಮಹತ್ವವಿದೆ. ಆಹಾರ, ವಸ್ತ್ರ, ಧಾನ್ಯಗಳನ್ನು ದಾನ ಮಾಡುವುದರಿಂದ ಅಹಂಕಾರ ಕಡಿಮೆಯಾಗುತ್ತದೆ, ಕರುಣೆ ಬೆಳೆಯುತ್ತದೆ. ಆಧ್ಯಾತ್ಮಿಕ ಜೀವನದಲ್ಲಿ ತ್ಯಾಗವೇ ಶ್ರೇಷ್ಠ ಸಾಧನೆ. ಕೊಡುವುದರಲ್ಲಿ ಇರುವ ಆನಂದವೇ ನಿಜವಾದ ಸಂಪತ್ತು ಎಂಬ ಸತ್ಯವನ್ನು ಈ ಹಬ್ಬ ಸ್ಮರಿಸುತ್ತದೆ
ಕರ್ನಾಟಕ, ಆಂಧ್ರಪ್ರದೇಶ, ಬಿಹಾರ, ಗೋವ, ಸಿಕ್ಕಿಂ, ಜಾರ್ಖಂಡ್, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಒರಿಸ್ಸಾ, ಉತ್ತರಪ್ರದೇಶ, ಉತ್ತರಾಂಚಲ, ಪಶ್ಚಿಮ ಬಂಗಾಳದಲ್ಲಿ `ಮಕರ ಸಂಕ್ರಾಂತಿ’ ಅಥವಾ `ಸಂಕ್ರಾಂತಿ’ ಎಂದು; ತಮಿಳುನಾಡಿನಲ್ಲಿ `ಪೊಂಗಲ್'(ಹೊಸ ವರ್ಷದ ಹಬ್ಬ) ಎಂದು; ರಾಜಸ್ಥಾನ, ಗುಜರಾತ್ನಲ್ಲಿ `ಉತ್ತರಾಯಣ’ ಎಂದು; ಹರಿಯಾಣ, ಉತ್ತರ ಪ್ರದೇಶ, ದೆಹಲಿ, ಪಂಜಾಬ್ನಲ್ಲಿ `ಮಾಘಿ’ ಎಂದು; ಅಸ್ಸಾಂನಲ್ಲಿ `ಮಾಘ ಬಿಹು;’ ಕಾಶ್ಮೀರದಲ್ಲಿ `ಶಿಶುರ ಸೇಂಕ್ರಾತ’; ಶಬರಿಮಲೈ ಬೆಟ್ಟದಲ್ಲಿ `ಮಕರ ವಿಲಕ್ಕು’; ಎಂದು ಸಂಕ್ರಾಂತಿ ಹಬ್ಬವನ್ನು ಭಾರತಾದ್ಯಂತ ಆಚರಿಸಲಾಗುತ್ತದೆ. ನೇಪಾಳದಲ್ಲಿ `ಮಾಘಿ’, ಬರ್ಮಾದಲ್ಲಿ `ಥಿಂಗ್ಯಾನ’; ಕಾಂಬೋಡಿಯಾದಲ್ಲಿ `ಮೊಹಸಂಗ್ರನ’, ಥೈಲ್ಯಾಂಡ್ನಲ್ಲಿ `ಸಂಗ್ರಾನ’ ಎಂದು ಆಚರಿಸುತ್ತಾರೆ. ಈ ಹಬ್ಬದ ಮೊದಲನೆಯ ದಿನವನ್ನು `ಭೋಗಿ’ ಎರಡನೇ ದಿನವನ್ನು `ಕರಿ’ ಎಂದು ಹೇಳಲಾಗುತ್ತದೆ. ಸೂರ್ಯನು ಕರ್ಕರಾಶಿಯಿಂದ ಮಕರರಾಶಿಗೆ ಪ್ರವೇಶಿಸುವ ದಿನವೇ `ಮಕರ ಸಂಕ್ರಾಂತಿ’. ಭೋಗಿ ಹಬ್ಬದಂದು ಋತುರಾಜ ಇಂದ್ರನನ್ನು ಪೂಜಿಸಿದರೆ, ಸಂಕ್ರಾಂತಿಯಂದು ಸೂರ್ಯನನ್ನು ಪೂಜಿಸಲಾಗುತ್ತದೆ.
ಮಕರ-ಸಂಕ್ರಾಂತಿಯು ದೇವತೆಗಳ ದಿನದ ಆರಂಭವಾಗಿದೆ. ಉತ್ತರಾಯಣವೆಂದರೆ ದೇವಾಯಣ, ದಕ್ಷಿಣಾಯಣವೆಂದರೆ ಪಿತ್ರಾಯಣ. ಭಗೀರಥನ ಪ್ರಯತ್ನದಿಂದ ಗಂಗೆ ಧರೆಗೆ ಬಂದು ಸಗರ ಮಹಾರಾಜನ 60,000 ಮಕ್ಕಳಿಗೆ ಮುಕ್ತಿಯನ್ನು ನೀಡಿರುವ ದಿನವು ಇದೇ ಆಗಿದೆ. ಆದ್ದರಿಂದ ತ್ರಿವೇಣಿ ಸಂಗಮ ಪ್ರಯಾಗರಾಜ, ಕುಂಭ ಮೇಳವು ನಡೆಯುತ್ತದೆ. ಇದೇ ದಿನದಂದು ಮಹಾಭಾರತದ ಇಚ್ಛಾ ಮರಣಿ ಭೀಷ್ಮ ಪಿತಾಮಹನು ದೇಹ ತ್ಯಜಿಸಿದನೆಂದು ಹೇಳಲಾಗುತ್ತದೆ.
ರಾಜಸ್ಥಾನ ಮತ್ತು ಗುಜರಾತ್ಗಳಲ್ಲಿ ವಿಶೇಷವಾಗಿ ಈ ಹಬ್ಬದಂದು ಗಾಳಿಪಟ ಉತ್ಸವ ನಡೆಯತ್ತದೆ. ಕರ್ನಾಟಕದ ಬೆಳಗಾವಿಯಲ್ಲಿ ಅನೇಕ ವರ್ಷಗಳಿಂದ ಗಾಳಿಪಟ ಉತ್ಸವವನ್ನು ಆಚರಿಸಲಾಗುತ್ತದೆ.
ಭೋಗಿ ಹಬ್ಬದಂದು ಸಜ್ಜೆ ರೊಟ್ಟಿ, ಬದನೆಕಾಯಿ ಪಲ್ಲೆಯನ್ನು ವಿಶೇಷವಾಗಿ ತಯಾರಿಸಲಾಗುತ್ತದೆ. ಸಂಕ್ರಾಂತಿಯ ದಿನದಂದು ಎಳ್ಳು-ಬೆಲ್ಲ ಸೇವಿಸುವ ಪದ್ಧತಿಯಿದೆ. ಕಬ್ಬು, ಎಳ್ಳು, ಬೆಲ್ಲ, ಸಜ್ಜೆ, ಗೆಜ್ಜರಿ, ಕಡಲೆ ಮುಂತಾದ ಆಹಾರ ಪದಾರ್ಥಗಳ ಸೇವನೆಯು ಚಳಿಗಾಲದಲ್ಲಿ ದೈಹಿಕ ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು. ಅಂದು ವಿಶೇಷವಾಗಿ ನದಿ, ಕೆರೆ, ಅಥವಾ ಹಳ್ಳಗಳಲ್ಲಿ ಸ್ನಾನವನ್ನು ಮಾಡುತ್ತಾರೆ, ಪುಣ್ಯಕ್ಷೇತ್ರಕ್ಕೆ ಹೋಗುತ್ತಾರೆ, ದಾನ ಧರ್ಮವನ್ನು ಮಾಡಿದಾಗ `ಸಂಕ್ರಾಂತಿ ಪುರುಷ” ಒಳ್ಳೆಯ ಫಲವನ್ನು ನೀಡುವನು ಎಂದು ನಂಬುತ್ತಾರೆ. ಸಂಕ್ರಾಂತಿಯ ದಿನ ಪರಸ್ಪರ ಭೇಟಿಯಾಗಿ ಎಳ್ಳು-ಬೆಲ್ಲವನ್ನು ಕೊಟ್ಟು, ಒಳ್ಳೆಯದನ್ನೇ ಮಾತನಾಡಿ ಎಂದು ಹೇಳುತ್ತಾರೆ.
ಭಾರತೀಯ ಹಬ್ಬಗಳಲ್ಲಿ ಜಾತಿ, ಮತ, ವರ್ಣ ಭಾಷಾ-ಭೇದ ಮತ್ತು ಇತರೆ ಭೇದ-ಭಾವಗಳನ್ನು ಮರೆತು ಸ್ನೇಹ, ಪ್ರೀತಿ, ಮಧುರತೆ ಮತ್ತು ಭ್ರಾತೃತ್ವದ ಭಾವನೆಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಎಳ್ಳು ಸ್ನೇಹ ಮತ್ತು ಪ್ರೀತಿಯ ಸಂಕೇತವಾಗಿದೆ; ಬೆಲ್ಲ ಮಧುರತೆಯ ಪ್ರತೀಕವಾಗಿದೆ. ನಮ್ಮಲ್ಲಿ ಪ್ರೀತಿ, ಸ್ನೇಹ ಬೆಳೆಯಬೇಕೆಂದರೆ, ನಾವು ನಮ್ಮ ದೇಹದ ಧರ್ಮಗಳನ್ನು ಮರೆತು, ವಿಶ್ವಕ್ಕೆ ಒಡೆಯನಾಗಿರುವ ಒಬ್ಬ ನಿರಾಕಾರ ಭಗವಂತನಿಗೆ ನಾವೆಲ್ಲರೂ ಮಕ್ಕಳು ಎಂದು ತಿಳಿದುಕೊಳ್ಳಬೇಕು. ಆ ಭಗವಂತನನ್ನೇ ಅಲ್ಲಾಹ, ಖುದಾ, ಗಾಡ್, ಈಶ್ವರನೆಂದು ಕರೆಯುತ್ತಾರೆ.
ಹಿಂದಿ ಭಾಷೆಯಲ್ಲಿ `ಗುಡ್ ನಹಿ ದೋ, ಲೆಕಿನ್ ಗುಡ್ ಜೈಸಾ ಮೀಠಾ ತೊ ಬೋಲೋ’ ಎಂದು ಹೇಳಲಾಗುತ್ತದೆ. ಅಂದರೆ `ಬೆಲ್ಲವನ್ನು ಕೊಡದಿದ್ದರೂ ಚಿಂತೆಯಿಲ್ಲ, ಬೆಲ್ಲದಂತೆ ಸಿಹಿ ಮಾತನಾಡಿ’ ಎಂದು ಹೇಳುತ್ತಾರೆ. ಮಹಾರಾಷ್ಟ್ರದಲ್ಲಿ ಇದೇ ರೀತಿ ಎಳ್ಳು ಮತ್ತು ಸಕ್ಕರೆ ಕುಸುರಿಕಾಳನ್ನು ಹಂಚುವಾಗ `ತಿಳ್ಗುಳ್ ಘ್ಯಾ ಆಣಿ ಗೋಡ್ ಗೋಡ್ ಬೋಲಾ’ ಎಂದು ಹೇಳುತ್ತಾರೆ. ನಮ್ಮಲ್ಲಿ `ವಸುಧೈವ ಕುಟುಂಬಕಂ’ ಎಂಬ ಭಾವನೆ ಜಾಗೃತವಾದಾಗ ಮಾತ್ರ ಸ್ನೇಹ ಪ್ರೀತಿಯು ಸಹಜವಾಗಿ ಬೆಳೆಯುತ್ತದೆ. ಆತ್ಮಿಕ ಭಾವನೆಯಿಂದ ಪರಸ್ಪರರಲ್ಲಿ ಮಧುರತೆ ಕಂಡು ಬರುತ್ತದೆ. ಆಗ ಮಾತ್ರ ನಮ್ಮಲ್ಲಿ ಶಾರೀರಿಕ, ಮಾನಸಿಕ, ಆಧ್ಯಾತ್ಮಿಕ ಪರಿವರ್ತನೆ ಉಂಟಾಗುತ್ತದೆ. ಬನ್ನಿ, ಈ ರೀತಿ ನಾವು ಎಲ್ಲರೂ ಭಗವಂತನ ಛತ್ರಛಾಯೆಯಲ್ಲಿದ್ದು, ಮಂಗನ ಕಾಯಿಲೆ, ಎಚ್.ಎಮ್.ಪಿ.ವಿ.ಮುಂತಾದ ಸಾಂಕ್ರಾಮಿಕ ರೋಗಗಳಿಗೆ ಬಲಿಯಾಗದೇ ಅರ್ಥಗರ್ಭಿತವಾದ ಸಂಕ್ರಾಂತಿ ಹಬ್ಬವನ್ನು ಆಚರಿಸೋಣ.
































