ಬೆಂಗಳೂರು : ಧರ್ಮ, ಜನಾಂಗ, ಭಾಷೆ, ಜನ್ಮಸ್ಥಳ, ಜಾತಿ ಅಥವಾ ಲಿಂಗ ಆಧಾರದ ಮೇಲೆ ದ್ವೇಷದ ಭಾಷಣ ಮಾಡುವವರಿಗೆ ನಿರ್ಬಂಧವಿರಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ‘ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ಮಸೂದೆ 2025’ ಅನ್ನು ಅಂಗೀಕರಿಸಿದೆ. ಬೆಳಗಾವಿ ಅಧಿವೇಶನದಲ್ಲಿ ಮಂಡಿಸಿ, ವಿಧಾನಪರಿಷತ್ ಮತ್ತು ರಾಜ್ಯಪಾಲರ ಅನುಮೋದನೆಯ ನಂತರ ಕಾನೂನಾಗಿ ಜಾರಿಗೆ ಬರುವ ಈ ಮಸೂದೆ ರಾಜ್ಯದಲ್ಲಿ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳನ್ನು ತಡೆಯಲು ಮಹತ್ವದ ಹೆಜ್ಜೆಯಾಗಿದೆ.
ಈ ಮಸೂದೆ ಧರ್ಮ, ಜನಾಂಗ, ಭಾಷೆ, ಜನ್ಮಸ್ಥಳ, ಜಾತಿ ಅಥವಾ ಲಿಂಗ ಆಧಾರದ ಮೇಲೆ ದ್ವೇಷದ ಭಾಷಣ, ಪ್ರಚೋದನೆ ಅಥವಾ ಪ್ರಚಾರ ಮಾಡುವುದನ್ನು ನಿರ್ಬಂಧಿಸುತ್ತದೆ. ಯಾವುದೇ ಮಾಧ್ಯಮ, ಸಾಮಾಜಿಕ ಜಾಲತಾಣ, ಪಠ್ಯ, ಚಿತ್ರ, ಧ್ವನಿ ಅಥವಾ ಡಿಜಿಟಲ್ ತಂತ್ರಾಂಶಗಳ ಮೂಲಕ ದ್ವೇಷವನ್ನು ಹರಡುವುದಕ್ಕೂ ಇದು ಅಡ್ಡಿ ಎತ್ತುತ್ತದೆ. ಸರ್ಕಾರವು ಈ ಕಾನೂನು ಯಾವುದೇ ರಾಜಕೀಯ ಪಕ್ಷ ಅಥವಾ ಸಮುದಾಯವನ್ನು ಗುರಿಯಾಗಿಸಿಲ್ಲವೆಂದು ಸ್ಪಷ್ಟಪಡಿಸಿದೆ ಮತ್ತು ಮುಖ್ಯ ಉದ್ದೇಶ ಸಾಮಾಜಿಕ ಸಾಮರಸ್ಯ ಕಾಪಾಡುವುದು ಮತ್ತು ದ್ವೇಷ ಹರಡುವಿಕೆಯನ್ನು ತಡೆಯುವುದು.
ಮಸೂದೆ ಪ್ರಕಾರ, ಪ್ರಥಮ ದ್ವೇಷಾಪರಾಧಕ್ಕೆ 1 ರಿಂದ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಪುನರಾವರ್ತಿತ ಅಪರಾಧಕ್ಕೆ 2 ರಿಂದ 10 ವರ್ಷಗಳ ಜೈಲು ಮತ್ತು ರೂ. 50,000 ರಿಂದ ರೂ.1,00,000 ದಂಡ ವಿಧಿಸಲಾಗುತ್ತದೆ. ಇಂತಹ ಕೃತ್ಯಗಳನ್ನು ಜಾಮೀನು ರಹಿತ ಅಪರಾಧ ಎಂದು ಪರಿಗಣಿಸಲಾಗಿದೆ. ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಲು, ಈ ಪ್ರಕರಣಗಳ ವಿಚಾರಣೆಯನ್ನು JMF-C ನ್ಯಾಯಾಲಯ ನಡೆಸಲಿದೆ. ಪ್ರಸ್ತುತ, ಭಾರತೀಯ ದಂಡಸಂಹಿತೆಯ ಸೆಕ್ಷನ್ 153A, 295A, 505 ಅನ್ನು ದ್ವೇಷ ಭಾಷಣದ ಪ್ರಕರಣಗಳಿಗೆ ಬಳಸಲಾಗುತ್ತಿದೆ.






























