ಇಬ್ಬರು ವಯಸ್ಕರು ಮದುವೆಗೆ ಕಾನೂನುಬದ್ಧ ವಯಸ್ಸನ್ನು ತಲುಪಿಲ್ಲದಿದ್ದರೂ ಸಹ, ಪರಸ್ಪರ ಒಪ್ಪಿಗೆಯಿಂದ ಲೀವ್ -ಇನ್ ಸಂಬಂಧದಲ್ಲಿರಲು ಅರ್ಹರು ಎಂದು ರಾಜಸ್ಥಾನ ಹೈಕೋರ್ಟ್ ತೀರ್ಪು ನೀಡಿದೆ.
ಕೋಟಾದ 18 ವರ್ಷದ ಯುವತಿ ಮತ್ತು 19 ವರ್ಷದ ಯುವಕ ತಾವು ಸ್ವತಂತ್ರ ಇಚ್ಛೆಯಿಂದ ಒಟ್ಟಿಗೆ ವಾಸಿಸುತ್ತಿದ್ದೇವೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಮಹಿಳೆಯ ಕುಟುಂಬವು ಈ ಸಂಬಂಧವನ್ನು ವಿರೋಧಿಸಿತು ಮತ್ತು ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿತು ಮತ್ತು ಕೋಟಾ ಪೊಲೀಸರಿಗೆ ನೀಡಿದ ದೂರನ್ನು ಪರಿಗಣಿಸಲಾಗಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದರು. ಜೋಡಿ ಸಲ್ಲಿಸಿದ ರಕ್ಷಣೆಗಾಗಿ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಅನೂಪ್ ಧಂಡ್ ಅವರು, ಈ ಮಹತ್ವದ ತೀರ್ಪು ನೀಡಿದ್ದಾರೆ. ಅರ್ಜಿಯನ್ನು ವಿರೋಧಿಸಿದ ಸಾರ್ವಜನಿಕ ಅಭಿಯೋಜಕ ವಿವೇಕ್ ಚೌಧರಿ, ಪುರುಷನಿಗೆ 21 ವರ್ಷ ವಯಸ್ಸಾಗಿಲ್ಲದ ಕಾರಣ ಈ ಜೋಡಿ ಲೀವ್-ಇನ್ ವ್ಯವಸ್ಥೆಯಲ್ಲಿರಲು ಅವಕಾಶ ನೀಡಬಾರದು ಎಂದು ವಾದಿಸಿದರು.
ಅರ್ಜಿದಾರರು ವಿವಾಹವಾಗುವ ವಯಸ್ಸಿನವರಲ್ಲ ಎಂಬ ಕಾರಣಕ್ಕೆ ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ನಿರಾಕರಿಸಲಾಗುವುದಿಲ್ಲ ಎಂದು ನ್ಯಾಯಾಲಯವು ವಾದವನ್ನು ತಳ್ಳಿಹಾಕಿತು. ಪ್ರತಿಯೊಬ್ಬ ವ್ಯಕ್ತಿಯ ಜೀವನ ಮತ್ತು ಸ್ವಾತಂತ್ರ್ಯವನ್ನು ಕಾಪಾಡುವ ಸಾಂವಿಧಾನಿಕ ಬಾಧ್ಯತೆ ರಾಜ್ಯಕ್ಕೆ ಇದೆ ಎಂದು ನ್ಯಾಯಾಧೀಶರು ಗಮನಿಸಿದರು, ಭಾರತೀಯ ಕಾನೂನಿನಡಿಯಲ್ಲಿ ಲಿವ್-ಇನ್ ಸಂಬಂಧಗಳನ್ನು ನಿಷೇಧಿಸಲಾಗಿಲ್ಲ ಅಥವಾ ಅಪರಾಧೀಕರಿಸಲಾಗಿಲ್ಲ ಎಂದು ಹೇಳಿದರು. ಅರ್ಜಿಯಲ್ಲಿ ಹೇಳಲಾದ ಸಂಗತಿಗಳನ್ನು ಪರಿಶೀಲಿಸಲು, ಬೆದರಿಕೆ ಗ್ರಹಿಕೆಯನ್ನು ನಿರ್ಣಯಿಸಲು ಮತ್ತು ಅಗತ್ಯವಿದ್ದರೆ ದಂಪತಿಗಳಿಗೆ ಅಗತ್ಯ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ನ್ಯಾಯಮೂರ್ತಿ ಧಂಡ್ ಭಿಲ್ವಾರಾ ಮತ್ತು ಜೋಧ್‌ಪುರ (ಗ್ರಾಮೀಣ) ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

































