ಕಲಬುರಗಿ : ರಾಜ್ಯದಲ್ಲಿನ ನಮ್ಮ ಸರ್ಕಾರ ತೆಗೆಯಲು ಪ್ಲ್ಯಾನ್ ನಡೆದಿದೆ. ಏನೇ ಮನಸ್ತಾಪ ಇದ್ರೂ ಒಗ್ಗಟ್ಟಾಗಿರಬೇಕು. ಇಲ್ಲದೆ ಹೋದರೆ ಸರ್ಕಾರ ಉರುಳಬಹುದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಿಎಂ ಹಾಗೂ ಡಿಸಿಎಂಗೆ ಎಚ್ಚರಿಕೆ ನೀಡಿದ್ದಾರೆ.
ಕಲಬುರಗಿಯಲ್ಲಿ ನಡೆದ ಉದ್ಯೋಗ ಮೇಳದ ವೇದಿಕೆಯಲ್ಲಿ ಮಾತನಾಡಿದ ಅವರು, ನೀವು ಹುಷಾರಾಗಿರಬೇಕು. ಮೋದಿ, ಅಮಿತ್ ಶಾ ನಿಮ್ಮ ಸರ್ಕಾರ ಬಿಳಿಸುತ್ತಾರೆ. ನಿಮ್ಮಲ್ಲಿ ಏನೇ ಮನಸ್ಥಾಪವಿದ್ದರೂ ಒಗ್ಗಟ್ಟಾಗಿರಬೇಕು ಎಂದರು.
ಮೋದಿ ಸರ್ಕಾರ ಈ ಭಾಗಕ್ಕೆ ಯಾವುದೇ ಕೆಲಸ ಮಾಡಿಲ್ಲ. ನಾನು 1 ವರ್ಷದಲ್ಲಿ ಮಾಡಿದ ಕೆಲಸ, ಅವರು 10 ವರ್ಷವಾದರೂ ಮಾಡುವುದಿಲ್ಲ. ಅವರು ಒಂದೇ ಒಂದು ರೈಲು ಸಹ ಇಲ್ಲಿಯವರೆಗೆ ಬಿಟ್ಟಿಲ್ಲ. ಕಲಬುರಗಿ ಏರ್‌ಪೋರ್ಟ್ಗೆ ಸರ್ಕಾರದಿಂದಲೇ ಜಮೀನು ಹಾಗೂ ಹಣ ಕೊಟ್ಟಿದ್ದೇವೆ. ಆದರೆ ನಮಗೆ ಒಂದು ವಿಮಾನ ಸಹ ಬರಲ್ಲ. ಅವರ ಕಿವಿ ಹಿಂಡಿ ಒಂದೆರಡು ಫ್ಲೈಟ್ ಇಲ್ಲಿಗೆ ಕೊಡಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿರೋಧ ಪಕ್ಷದವರು ಮಾತಾಡಿದರೆ ಇಡಿ ಮೂಲಕ ಹೆಣೆಯುತ್ತಾರೆ. 1937ರಲ್ಲಿ ನೆಹರೂ ಅವರು ಜನರ ಹೋರಾಟಕ್ಕಾಗಿ 3 ಭಾಷೆಯಲ್ಲಿ ಪತ್ರಿಕೆ ಆರಂಭ ಮಾಡಿದ್ದರು. ಈಗ ಇಡಿಯನ್ನು ಕೂರಿಸಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮೇಲೆ ಚಾರ್ಜ್ಶೀಟ್ ಹಾಕಿಸಿದ್ದಾರೆ. ಇವರಿಗೆ ನಾಚಿಕೆ ಆಗಬೇಕು. ಏನು ನೀವು ಅದಕ್ಕೆ ಹಣ ಕೊಟ್ಟಿದ್ರಾ? ಎಂದು ಪ್ರಶ್ನೆ ಮಾಡಿದರು.