ಸಾಗರ: ತಾಲೂಕಿನಲ್ಲಿ ನೂತನವಾಗಿ ಲೋಕಾರ್ಪಣೆಯಾಗಿರುವ ಎರಡು ಕಿಮೀ ಉದ್ದದ ಸಿಗಂದೂರು ಸೇತುವೆಯ ಮೇಲೆ ವೀಲಿಂಗ್ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದನ್ನು ಗಮನಿಸಿದ ಪೊಲೀಸರು ವಿಡಿಯೋದ ಜಾಡು ಅನುಸರಿಸಿ ವೀಲಿಂಗ್ ಚಾಲಕನಿಗೆ ಐದು ಸಾವಿರ ರೂ. ದಂಡ ವಿಧಿಸಿರುವ ಪ್ರಕರಣ ನಡೆದಿದೆ.
ಪ್ರಕರಣ ಆಗಸ್ಟ್ 15ರಂದು ನಡೆದಿತ್ತು. ನಂತರದಲ್ಲಿ ಆ ವೀಲಿಂಗ್ನ ದೃಶ್ಯ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ತನಿಖೆ ನಡೆಸಿ, ಸಂಬಂಧಿಸಿದ ಬೈಕ್ನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಈ ವಿಚಾರದಲ್ಲಿ ಮಾಹಿತಿ ನೀಡಿರುವ ಗ್ರಾಮಾಂತರ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಮಹಾಬಲೇಶ್ವರ ನಾಯ್ಕ, ರಸ್ತೆಯಲ್ಲಿ ವೀಲಿಂಗ್ ಮಾಡುವುದು ಶಿಕ್ಷಾರ್ಹ ಅಪರಾಧ. ಒಂದನೇ ಬಾರಿ ತಪ್ಪು ಮಾಡಿ ಸಿಕ್ಕಿ ಬಿದ್ದಾಗ 5 ಸಾವಿರ ದಂಡವಿದೆ. ಎರಡನೇ ಬಾರಿ ವೀಲಿಂಗ್ ಮಾಡಿದರೆ 25 ಸಾವಿರ ರೂ. ದಂಡ ಜೊತೆಗೆ ಸರ್ಕಾರ ಬೈಕ್ ಮುಟ್ಟುಗೋಲು ಹಾಕಿಕೊಳ್ಳಲಿದೆ ಎಂಬುದಾಗಿ ಎಚ್ಚರಿಕೆ ನೀಡಿದ್ದಾರೆ.
ವಿಧಿಸಿದ ದಂಡ ಪಾವತಿಸಿರುವ ಬೈಕ್ ಸವಾರ ಮಾಧ್ಯಮಗಳ ಜೊತೆ ಮಾತನಾಡಿ, ಸಿಗಂದೂರು ಸೇತುವೆ ನೋಡಲು ತೆರಳುವಂತಹ ಯಾವುದೇ ವಾಹನ ಸವಾರರು ನಾನು ಮಾಡಿದಂತಹ ತಪ್ಪು ಮಾಡಬೇಡಿ. ಬೈಕ್ ಚಲಾಯಿಸುವಂತ ಸಂದರ್ಭದಲ್ಲಿ ಹೆಲ್ಮಟ್ ಧರಿಸಿ. ನಿಮ್ಮ ಅಜಾಗರೂಕ ಚಾಲನೆಯಿಂದ ಅಪಘಾತ ಮಾಡಿ ನಿಮ್ಮ ಕುಟುಂಬಸ್ಥರು ಕಣ್ಣೀರಿಡುವಂತೆ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.