ಬೆಂಗಳೂರು: ಉಡಾನ್ ಯೋಜನೆಯಡಿ 5 ಹೊಸ ಏರ್ಸ್ಟ್ರಿಪ್ (ಮಿನಿ ಏರ್ಪೋರ್ಟ್) ನಿರ್ಮಾಣಕ್ಕೆ ರಾಜ್ಯದಲ್ಲಿ ಸ್ಥಳಗಳನ್ನು ನಾಗರಿಕ ವಿಮಾನಯಾನ ಸಚಿವಾಲಯವು ಗುರ್ತಿಸಿದೆ.ಮಾಜಿ ಮುಖ್ಯಮಂತ್ರಿ ಮತ್ತು ಹಾವೇರಿ ಸಂಸದ ಬಸವರಾಜ್ ಬೊಮ್ಮಾಯಿ ಅವರು ಬುಧವಾರ ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳೀಧರ್ ಮೊಹಲ್ ಅವರು ಉತ್ತರಿಸಿದರು.
ಉಡಾನ್ ಯೋಜನೆಯಡಿ ಏರ್ಸ್ಟ್ರಿಫ್ಸ್ ನಿರ್ಮಾಣಕ್ಕೆ ಕರ್ನಾಟಕದ ಬಳ್ಳಾರಿ, ಕೋಲಾರ, ಕುಶಾಲನಗರ, ರಾಯಚೂರು ಹಾಗೂ ಹಾಸನವನ್ನು ತಾತ್ಕಾಲಿಕವಾಗಿ ಗುರುತಿಸಲಾಗಿದೆ. ಬೀದರ್, ಮೈಸೂರು, ವಿದ್ಯಾನಗರ, ಹುಬ್ಬಳ್ಳಿ, ಕಲಬುರಗಿ, ಬೆಳಗಾವಿ, ಶಿವಮೊಗ್ಗದಲ್ಲಿ ಈಗಾಗಲೇ ವಿಮಾನಗಳ ಹಾರಾಟ ಪ್ರಕ್ರಿಯೆ ಮುಂದುವರಿದಿದೆ. ವಿಜಯಪುರ ಹಾಗೂ ಕಾರವಾರದಲ್ಲಿ ಇನ್ನಷ್ಟೇ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯ ಆರಂಭವಾಗಬೇಕಿದೆ ಎಂದು ಹೇಳಿದರು.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಯೊಬ್ಬರು ಮಾತನಾಡಿ, ಈ ಐದು ಏರ್ಸ್ಟ್ರಿಪ್ಗಳಿಗೆ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿದ್ದು, ವಿಭಿನ್ನ ಹಂತಗಳಲ್ಲಿವೆ ಎಂದು ತಿಳಿಸಿದ್ದಾರೆ.
ಉಡಾನ್-ಪ್ರಾದೇಶಿಕ ಸಂಪರ್ಕ ಯೋಜನೆಯು ಮಾರುಕಟ್ಟೆ ಆಧಾರಿತವಾಗಿದೆ. ವಿಮಾನಯಾನ ಮಾರ್ಗ, ಸಂಪರ್ಕ ಸ್ಥಳಗಳು, ನಿರ್ದಿಷ್ಟ ಹಾರಾಟ ಮಾರ್ಗಗಳ ವಿಚಾರವಾಗಿ ಏರ್ಲೈನ್ ಆಪರೇಟರ್ಗಳ ಕಾರ್ಯಸಾಧ್ಯತಾ ಸ್ಥಿತಿಗತಿ ಆಧರಿಸಿ ನಿಯಮಿತವಾಗಿ ಬಿಡ್ಡಿಂಗ್ ಸುತ್ತುಗಳು ನಡೆಯಲಿವೆ. ಹಾಗೆಯೇ ವಿಮಾನಯಾನ ಸೇವೆ ಮೇಲ್ದರ್ಜೆಗೇರಿಸುವುದು, ನವೀಕರಿಸುವುದು ಸೂಕ್ತ ಬಿಡ್ ಹಾಗೂ ಆಯ್ದ ಏರ್ಲೈನ್ ಆಪರೇಟರ್ಗಳಿಗೆ ಹಂಚಿಕೆ ಮಾಡುವುದರ ಮೇಲೆ ಅವಲಂಬಿತವಾಗಿರಲಿದೆ.