ಉತ್ತರ ಪ್ರದೇಶದಇಲ್ಲಿನ ಸರಯೂ ಕಾಲುವೆಗೆ ಆಯತಪ್ಪಿ ಕಾರು ಬಿದ್ದು 11 ಮಂದಿ ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡ ಭೀಕರ ಘಟನೆ ಇಂದು (ಆ.3) ನಡೆದಿದೆ.
ತೀವ್ರ ಅಸ್ವಸ್ಥವಾಗಿರುವ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿ ಕೃಷ್ಣ ಗೋಪಾಲ್ ರೈ, ಮೃತರು ಸಿಹಗಾಂವ್ ಗ್ರಾಮದಿಂದ ಖರ್ಗುಪುರದ ಪೃಥ್ವಿನಾಥ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಬೆಲ್ವಾ ಬಹುತಾ ಬಳಿ ಅಪಘಾತ ಸಂಭವಿಸಿದೆ. ಎಸ್‌ಯುವಿ ಕಾರು ಕಾಲುವೆಗೆ ಆಯತಪ್ಪಿ ಬಿದ್ದಿದೆ. ಇದರಲ್ಲಿ ಚಾಲಕ ಸೇರಿದಂತೆ 15 ಜನರು ಪ್ರಯಾಣಿಸುತ್ತಿದ್ದರು ಎಂದು ತಿಳಿಸಿದ್ದಾರೆ.ಇದನ್ನು ಕಂಡವರು ತಕ್ಷಣವೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಗ್ರಾಮಸ್ಥರು ಮತ್ತು ರಕ್ಷಣಾ ತಂಡಗಳ ಸಹಾಯದಿಂದ ಮುಳುಗಿದ ವಾಹನದಿಂದ 11 ಶವಗಳನ್ನು ಹೊರತೆಗೆಯಲಾಯಿತು. ಗಂಭೀರ ಸ್ಥಿತಿಯಲ್ಲಿದ್ದ ಇತರ ನಾಲ್ವರು ಪ್ರಯಾಣಿಕರನ್ನು ರಕ್ಷಿಸಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಗುಣಮುಖರಾದ ಬಳಿಕ ಬದುಕುಳಿವರಿಂದ ಮಾಹಿತಿ ಸಂಗ್ರಹಿಸಲಾಗುವುದು. ಕಾರು ಅಪಘಾತಕ್ಕೆ ಕಾರಣ ಏನೆಂಬುದರ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.