ಓಣಂ ಕೇರಳ ರಾಜ್ಯದ ಹಬ್ಬ. ಮಲಯಾಳಿಗಳು ಅತ್ಯಂತ ಖುಷಿಯಿಂದ ಈ ಹಬ್ಬವನ್ನು ಆಚರಿಸುತ್ತಾರೆ. ಇದು ಆಧುನಿಕ ಕಾಲಮಾನದಲ್ಲಿಯೂ ಉಳಿಸಿ, ಆಚರಿಸಿಕೊಂಡು ಬರಲಾಗುತ್ತಿರುವ ಅತ್ಯಂತ ಪುರಾತನ ಹಬ್ಬವಾಗಿದೆ.
ಭತ್ತದ ಸುಗ್ಗಿಯ ಸಂಭ್ರಮ ಮತ್ತು ಮಳೆಗಾಲದ ಹೂಫಸಲು – ಇವೆರಡರ ಸಂಗಮದ ಕುರುಹಾಗಿ ಮತ್ತು ಅರಸ ಮಾವೆಲಿಯು ಪಾತಾಳಲೋಕದಿಂದ ಭೂಮಿಗೆ ವಾರ್ಷಿಕ ಭೇಟಿಯ ನೆನಪಿನಲ್ಲಿ, ಮಲಯಾಳಿ ತಿಂಗಳು ಚಿಂಗಂನಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಅನಾದಿ ಕಾಲದಿಂದಲೂ ಮಾವೇಲಿಯನ್ನು ಕೇರಳದ ಜನತೆ ಆರಾಧಿಸುತ್ತ ಬಂದಿರುವುದರಿಂದ ಓಣಂ ಹಬ್ಬಕ್ಕೆ ಅದರದ್ದೇ ಆದ ವಿಶಿಷ್ಟತೆ ಇದೆ.
ಹತ್ತು ದಿನಗಳವರೆಗೆ ಸಡಗರದಿಂದ ಜರುಗುವ ಈ ಹಬ್ಬವು ಕೇರಳದ ಹಲವಾರು ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕತೆಯನ್ನು ಬಿಂಬಿಸುತ್ತದೆ. ಓಣಂ ಪೂಕಳಂ ಎಂದರೇನು ? ಕೇರಳದ ಪ್ರಮುಖ ಹಬ್ಬವಾಗಿರುವ ಓಣಂನ ಪ್ರಮುಖ ಆಕರ್ಷಣೆಯೆಂದರೆ ಪೂಕಳಂ ಅಂದ್ರೆ ಹೂವಿನಿಂದ ಹಾಕುವ ರಂಗೋಲಿ. 10 ದಿನ ಮನೆಯ ಮುಂದುಗಡೆ ಹೂವಿನ ರಂಗೋಲಿ ಹಾಕಿ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ.
ಪೂಕಳಂಗಳು ಸಾಮಾನ್ಯವಾಗಿ ವೃತ್ತಾಕಾರದಲ್ಲಿರುತ್ತವೆ. ‘ಪೂ’ ಎಂದರೆ ಹೂವು ಮತ್ತು ‘ಕೋಲಂ’ ಎಂದರೆ ಅಲಂಕಾರಿಕ ವಿನ್ಯಾಸಗಳು ಅಥವಾ ರಂಗೋಲಿ. ತಾಜಾ ಹೂವುಗಳು ಮತ್ತು ದಳಗಳನ್ನು ಬಳಸಿ ಈ ರಂಗೋಲಿಯನ್ನು ತಯಾರಿಸಲಾಗುತ್ತದೆ, ಪೂಕಳಂಗಳನ್ನು ಮನೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ರಾಜ ಮಹಾಬಲಿಗೆ ಸ್ವಾಗತ ಕೋರಲು ಹಾಕಲಾಗುತ್ತದೆ. ಹಿಂದಿನ ಕಾಲದಲ್ಲೆಲ್ಲಾ ಮನೆಯ ಸುತ್ತಮುತ್ತಲೂ ಸಿಗುವ ಹೂಗಳನ್ನು ಮಾತ್ರ ಬಳಸಿ ಸಣ್ಣದಾಗಿ ಪೂಕಳಂ ರಚಿಸಲಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಮಾರುಕಟ್ಟೆಯಿಂದ ಭಿನ್ನ-ವಿಭಿನ್ನ ಹೂಗಳನ್ನು ತಂದು ದೊಡ್ಡ ದೊಡ್ಡ ಹೂವಿನ ರಂಗೋಲಿಗಳನ್ನು ರಚಿಸುತ್ತಾರೆ.
ಪೂಕಳಂ ರಚಿಸುವುದರ ಮಹತ್ವವೇನು?
ಪೂಕಳಂ, ಸಮೃದ್ಧಿ ಮತ್ತು ಸಂತೋಷದ ಸಂಕೇತವಾಗಿದೆ. ಆಠಂ ದಿನದಿಂದ ಪ್ರಾರಂಭಿಸಿ ತಿರುವೋಣಂ ವರೆಗೆ ಮಲಯಾಳಿ ಮನೆಗಳಲ್ಲಿ ಪೂಕಳಂಗಳನ್ನು ರಚಿಸಲಾಗುತ್ತದೆ. ಹಲವಾರು ವೃತ್ತಗಳ ಡಿಸೈನ್ ಬಿಡಿಸಿ, ಹೂವುಗಳನ್ನು ತುಂಬಿ ಪೂಕಳಂ ಬಿಡಿಸುತ್ತಾರೆ ಸಾಂಪ್ರದಾಯಿಕ ಪೂಕಳಂನ್ನು ಹಲವಾರು ದೇವತೆಗಳಿಗೆ ಅರ್ಪಿಸಲು ವಿನ್ಯಾಸಗೊಳಿಸಲಾಗಿದೆ. ಸಂಪ್ರದಾಯದ ಪ್ರಕಾರ, ಪ್ರತಿಯೊಂದು ಸುತ್ತುಗಳನ್ನು ಭಗವಾನ್ ಶಿವ ಮತ್ತು ಅವನ ಪತ್ನಿ ಪಾರ್ವತಿ, ಅವರ ಮಕ್ಕಳಾದ ಗಣೇಶ ಮತ್ತು ಕಾರ್ತಿಕೇಯ, ಭಗವಾನ್ ಬ್ರಹ್ಮ ಮತ್ತು ಕೊನೆಯದಾಗಿ ಭಗವಾನ್ ವಿಷ್ಣು ಮತ್ತು ರಾಜನ ವಾಮನ ಅವತಾರವನ್ನು ಗೌರವಿಸಲು ಮಾಡಲಾಗುತ್ತದೆ.
ಓಣಂ ಹಬ್ಬಕ್ಕೆ ಪೂಕಳಂ ರಚಿಸುವುದು ಯಾಕೆ? ಓಣಂಗೆ ಸಂಬಂಧಿಸಿದ ದಂತಕಥೆಯ ಪ್ರಕಾರ, ಈ ದಿನದಂದು ತನ್ನ ಪ್ರಜೆಗಳನ್ನು ನೋಡಲು ಭೂಮಿಗೆ ಬರುವ ಮಹಾಬಲಿಯನ್ನು ಸ್ವಾಗತಿಸಲು ಹೂವಿನ ರಂಗೋಲಿ ರಚಿಸಲಾಗುತ್ತದೆ. ಭಗವಾನ್ ವಿಷ್ಣುವಿನ ವಾಮನ ಅವತಾರವು ಭೂಮಿಯಲ್ಲಿ ಜನರಿಗೆ ತೊಂದರೆ ಕೊಡುತ್ತಿದ್ದ ರಾಜ ಮಹಾಬಲಿಯ ಬಳಿ ಮೂರು ಸ್ಥಳಗಳನ್ನು ಕೊಡುವಂತೆ ಕೇಳಿಕೊಂಡಿತು.
ಇದಕ್ಕೆ ಮಹಾಬಲಿಯು ಒಪ್ಪಿದನು. ಭಗವಂತನು ಒಂದು ಕಾಲಿನಿಂದ ಭೂಮಿ, ಇನ್ನೊಂದು ಪಾದದಿಂದ ನೀರು, ಆಕಾಶವನ್ನು ಮುಚ್ಚಿದನು. ಭಗವಾನ್ ವಿಷ್ಣುವು ತನ್ನ ಮೂರನೇ ಪಾದವನ್ನು ಇಡಲು ಎಲ್ಲಿಡಲಿ ಎಂದು ಕೇಳಿದಾಗ ಮಹಾಬಲಿಯು ತನ್ನ ತಲೆಯನ್ನು ತೋರಿಸಿದನು. ವಿಷ್ಣು ಮಹಾಬಲಿಯ ತಲೆಯ ಮೇಲೆ ಕಾಲಿಟ್ಟು ಆತನನ್ನು ಪಾತಾಳಕ್ಕೆ ತಳ್ಳಿದನು. ಆದರೆ ವಿಷ್ಣು ಮಹಾಬಲಿಯ ಭಕ್ತಿಗೆ ಸಂತೋಷಪಟ್ಟು ಪ್ರತಿ ವರ್ಷ ಮಹಾಬಲಿ ಜನರನ್ನು ಭೇಟಿ ಮಾಡಲು ಸಾಧ್ಯವಾಗುವಂತೆ ವರವನ್ನು ನೀಡುತ್ತಾನೆ. ಭೂಮಿಗೆ ಮಹಾಬಲಿ ಬರುವ ಈ ದಿನವನ್ನೇ ಓಣಂ ಎಂದು ಆಚರಿಸಲಾಗುತ್ತದೆ.