ರಾಜಸ್ಥಾನದ ಬಕಾನಿ ಪಟ್ಟಣದಲ್ಲಿನ ಕುಟುಂಬವೊಂದರಲ್ಲಿ ಜಗಳ ಉಂಟಾಗಿದ್ದು, ಸಿಟ್ಟಿಗೆದ್ದ ಹೆಂಡತಿ, ಗಂಡನ ನಾಲಿಗೆಯನ್ನೇ ಕಚ್ಚಿ ತುಂಡು ಮಾಡಿದ ಘಟನೆ ನಡೆದಿದೆ.
ಭಾರತೀಯ ನ್ಯಾಯ ಸಂಹಿತೆ(ಬಿಎನ್‌ಎಸ್) ಸೆಕ್ಷನ್ 115(2) ಮತ್ತು 118(2) ರಡಿ ರವಿನಾ ಸೈನ್ (23) ಎಂಬವರ ವಿರುದ್ಧ ಅಪರಾಧ ಪ್ರಕರಣ ದಾಖಲಿಸಲಾಗಿದೆ. ಪತ್ನಿಯನ್ನು ಶನಿವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಕಾನಿ ಪಟ್ಟಣದ ಕನ್ನಯಾಲಾಲ್ ಸೈನ್ (25) ಮತ್ತು ಪಕ್ಕದ ಸುನೆಲ್ ಗ್ರಾಮದ ರವಿನಾ ಸೈನ್ ಒಂದೂವರೆ ವರ್ಷ ಹಿಂದೆ ವಿವಾಹವಾಗಿದ್ದು, ದಂಪತಿ ಆಗಾಗ್ಗೆ ಜಗಳ ವಾಡುತ್ತಿದ್ದರು. ಗುರುವಾರ ರಾತ್ರಿಯೂ ಜಗಳ ಆರಂಭವಾಗಿದ್ದು, ವಿಪರೀತ ಸಿಟ್ಟಿಗೆದ್ದಿದ್ದ ರವಿನಾ, ಕನ್ನಯಾಲಾಲ್ ನಾಲಿಗೆಯನ್ನು ಹೊರಗೆಳೆದು ಅರ್ಧಭಾಗವನ್ನು ಕಚ್ಚಿ ತುಂಡರಿಸಿದ್ದಾಳೆ. ಕುಟುಂಬದ ಇತರೆ ಸದಸ್ಯರು ಕನ್ನಯಾಲಾಲ್‌ನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ಝಾಲಾವರ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ಪೊಲೀಸ್ ಸಹಾಯಕ ಸಬ್ ಇನ್ ಸ್ಪೆಕ್ಟರ್ ಹೇಳಿದ್ದಾರೆ.