ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ (WCL 2025) ಟೂರ್ನಿಯ ದ್ವಿತೀಯ ಸೀಸನ್‌ನಲ್ಲೂ ಪಾಕಿಸ್ತಾನ್ ಚಾಂಪಿಯನ್ಸ್ (Pakistan Champions) ಫೈನಲ್‌ಗೆ ಪ್ರವೇಶಿಸಿದೆ. ಈ ಬಾರಿ ಫೈನಲ್‌ಗೆ ಎಂಟ್ರಿ ಕೊಟ್ಟಿರುವುದು ಸೆಮಿಫೈನಲ್ ಆಡದೇ ಎಂಬುದು ವಿಶೇಷ. ಇದರೊಂದಿಗೆ ವಿಶೇಷ ದಾಖಲೆಯೊಂದು ಪಾಕಿಸ್ತಾನ್ ಚಾಂಪಿಯನ್ಸ್ ತಂಡದ ಪಾಲಾಗಿದೆ.
ಇಂದು (ಜುಲೈ 31) ನಡೆಯಬೇಕಿದ್ದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ್ ಚಾಂಪಿಯನ್ಸ್ ಹಾಗೂ ಇಂಡಿಯಾ ಚಾಂಪಿಯನ್ಸ್ ತಂಡಗಳು ಮುಖಾಮುಖಿಯಾಗಬೇಕಿತ್ತು. ಆದರೆ ಈ ನಿರ್ಣಾಯಕ ಪಂದ್ಯದಿಂದ ಇಂಡಿಯಾ ಚಾಂಪಿಯನ್ಸ್ ಹಿಂದೆ ಸರಿದಿದೆ. ಇದರಿಂದಾಗಿ ಮೊದಲ ಸೆಮಿಫೈನಲ್ ಪಂದ್ಯ ಕೂಡ ರದ್ದಾಗಿದೆ.
ಸೆಮಿಫೈನಲ್ ಪಂದ್ಯದಿಂದ ಇಂಡಿಯಾ ಚಾಂಪಿಯನ್ಸ್ ಹಿಂದೆ ಸರಿದ ಕಾರಣ ಪಾಕಿಸ್ತಾನ್ ಚಾಂಪಿಯನ್ಸ್ ತಂಡವು ನೇರವಾಗಿ ಫೈನಲ್‌ಗೆ ಪ್ರವೇಶಿಸಿದೆ. ಈ ಮೂಲಕ ಸೆಮಿಫೈನಲ್ ಅಥವಾ ನಾಕೌಟ್ ಪಂದ್ಯವಾಡದೇ ಫೈನಲ್‌ಗೆ ಪ್ರವೇಶಿಸಿದ ವಿಶ್ವದ ಮೊದಲ ತಂಡ ಎಂಬ ದಾಖಲೆಯನ್ನು ಪಾಕಿಸ್ತಾನ್ ಚಾಂಪಿಯನ್ಸ್ ತನ್ನದಾಗಿಸಿಕೊಂಡಿದೆ.
ಟಿ20 ಕ್ರಿಕೆಟ್ ಇತಿಹಾಸದಲ್ಲಿ ಯಾವುದೇ ತಂಡ ಸೆಮಿಫೈನಲ್ ಅಥವಾ ನಾಕೌಟ್ ಮ್ಯಾಚ್ ಆಡದೇ ನೇರವಾಗಿ ಫೈನಲ್ ಪ್ರವೇಶಿಸಿಲ್ಲ. ಆದರೆ ಭಾರತೀಯ ಆಟಗಾರರು ಪಾಕ್ ವಿರುದ್ಧ ಕಣಕ್ಕಿಳಿಯಲು ನಿರಾಕರಿಸಿದ್ದರಿಂದ ಇದೀಗ ಪಾಕಿಸ್ತಾನ್ ಚಾಂಪಿಯನ್ಸ್ ಅಂತಿಮ ಸುತ್ತಿಗೆ ಎಂಟ್ರಿ ಕೊಟ್ಟಿದೆ. ಈ ಮೂಲಕ ಸೆಮಿಫೈನಲ್ ಆಡದೇ ಟಿ20 ಟೂರ್ನಿಯಲ್ಲಿ ಫೈನಲ್ ಆಡಲಿರುವ ವಿಶ್ವದ ಮೊದಲ ತಂಡ ಎನಿಸಿಕೊಂಡಿದೆ.
ಇನ್ನು ಇಂದು ನಡೆಯಲಿರುವ ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯ ದ್ವಿತೀಯ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಚಾಂಪಿಯನ್ಸ್ ಹಾಗೂ ಸೌತ್ ಆಫ್ರಿಕಾ ಚಾಂಪಿಯನ್ಸ್ ತಂಡಗಳು ಮುಖಾಮುಖಿಯಾಗಲಿದೆ. ಬರ್ಮಿಂಗ್ಹ್ಯಾಮ್‌ನ ಎಡ್ಜ್ ಬಾಸ್ಟನ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ತಂಡ ಪಾಕಿಸ್ತಾನ್ ಚಾಂಪಿಯನ್ಸ್ ವಿರುದ್ಧ ಫೈನಲ್ ಆಡಲಿದೆ.