ಜಗತ್ತಿನ ಅತೀ ಹಿರಿಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಜಪಾನಿನ 116 ವರ್ಷದ ಟೊಮಿಕೋ ಇಟೂಕಾ ನಿಧನರಾಗಿದ್ದಾರೆ. ಇಟೂಕಾ ಅವರು ಪಶ್ಚಿಮ ಜಪಾನಿನ ಶಿಯಾ ಪಟ್ಟಣದಲ್ಲಿರುವ ನರ್ಸಿಂಗ್ ಹೋಂ ಒಂದರಲ್ಲಿ ಮೃತಪಟ್ಟಿದ್ದಾರೆ. ಈ ವಿಚಾರವನ್ನು ಹೊಯ್ಗೋದಲ್ಲಿರುವ ಸ್ಥಳೀಯಾಡಳಿತವು ದೃಢಪಡಿಸಿದೆ.
ಈ ಮಹಿಳೆ 1908ರ ಮೇ 23ರಂದು ಜನಿಸಿದ್ದರು. ಒಸಾಕ ಎಂಬಲ್ಲಿ ಜನಿಸಿದ್ದ ಈಕೆ ಮೂವರು ಸಹೋದರಿಯರಲ್ಲಿ ಹಿರಿಯರಾಗಿದ್ದರು. ನಗರದಲ್ಲಿರುವ ಸ್ಪೆಷಲ್ ನರ್ಸಿಂಗ್ ಹೋಂನಲ್ಲಿ ಆರೈಕೆಯಲ್ಲಿದ್ದ ಇವರು, ತನ್ನ ನೆಚ್ಚಿನ ಲ್ಯಾಕ್ಟಿಕ್ ಆಸಿಡ್ ಪಾನೀಯಗಳನ್ನು ಸಂತೋಷದಿಂದ ಸೇವಿಸುತ್ತಿದ್ದರು ಮತ್ತು ಆಗಾಗ ಇಲ್ಲಿನ ಸಿಬ್ಬಂದಿಗಳಿಗೆ ಧನ್ಯವಾದಗಳನ್ನು ಹೇಳುತ್ತಿದ್ದರು ಎಂದು ಜಪಾನಿ ದೈನಿಕ ಮೈನಿಚಿ ವರದಿ ಮಾಡಿದೆ. ಅಶಿಯಾ ಮೇಯರ್ ಪ್ರತಿಕ್ರಿಯೆ ನೀಡಿದ್ದು, ‘ಅವರಸುದೀರ್ಘ ಜೀವನದಲ್ಲಿ, ನಮಗೆ ತುಂಬಾ ಧೈರ್ಯ ಹಾಗೂ ಆಶಾವಾದವನ್ನು ನೀಡಿದ್ದರು. ಅವರ ನಿಧನಕ್ಕೆ ತೀವ್ರ ಸಂತಾಪಗಳನ್ನು ಸೂಚಿಸುತ್ತಿದ್ದೇನೆ’ ಎಂದು ಹೇಳಿದ್ದಾರೆ. ಇಟೂಕಾ ಅವರು 2023ರಲ್ಲಿ ಜಪಾನಿನ ಬದುಕಿರುವ ಅತೀ ಹಿರಿಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 116 ವರ್ಷದ ಫುಸಾ ತತ್ಸುಮಿ ಎಂಬವರು ಒಸಾಕಾದಲ್ಲಿ ನಿಧನ ಹೊಂದಿದ ಬಳಿಕ ಇವರಿಗೆ ಈ ಪಟ್ಟ ಲಭಿಸಿತ್ತು. ಫುಸಾ ತಟ್ಸುಮಿ ಅವರು ಎಪ್ರಿಲ್ 25 1907ರಂದು ಜನಿಸಿದ್ದರು ಮತ್ತು ತಮ್ಮ ಕೊನೆಯ ದಿನಗಳನ್ನು ಅವರು ಕಶಿವಾರದಲ್ಲಿರುವ ನರ್ಸಿಂಗ್ ಹೋಂನಲ್ಲೇ ಕಳೆದಿದ್ದರು. ತಟ್ಸುಮಿ ಅವರು 2022ರಲ್ಲಿ ಜಪಾನಿನ ಬದುಕಿರುವ ಅತ್ಯಂತ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ 2022ರ ಎಪ್ರಿಲ್ ತಿಂಗಳಿನಲ್ಲಿ ಪಾತ್ರರಾಗಿದ್ದರು. 119 ವರ್ಷದ ಫುಕುವೋಕಾ ಅವರ ಮರಣದ ಬಳಿಕ ಇವರಿಗೆ ಈ ಪಟ್ಟ ಲಭಿಸಿತ್ತು. ಇಟೂಕಾ ಅವರನ್ನು 2024ರಲ್ಲಿ ಗಿನ್ನೆಸ್ ವರ್ಲ್ ರೆಕಾರ್ಡ್ ವಿಶ್ವದ ಬದುಕಿರುವ ಅತ್ಯಂತ ಹಿರಿಯ ವ್ಯಕ್ತಿ ಎಂದು ಗುರುತಿಸಿತ್ತು. ಸ್ಪೈನ್‌ನ (Spain) ಕ್ಯಾಟಲೋನಿಯಾದ ಓಲೋಟ್‌ನಲ್ಲಿರುವ 117 ವರ್ಷದ ಮರಿಯಾ ಬ್ರನ್ಯಾಸ್ ಮೊರೆರಾ ನಿಧನ ಬಳಿಕ ಈ ಪಟ್ಟ ಇಟೂಕಾ ಪಾಲಾಗಿತ್ತು. ಮೊರೆರ ಅವರು 1907ರ ಮಾರ್ಚ್ 4ರಂದು ಜನಿಸಿದ್ದರು ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಬುಕ್ ಹೇಳುತ್ತದೆ.