ಗರಿಕೆ ಹುಲ್ಲು ಅಥವಾ ದೂರ್ವೆ ಬಗ್ಗೆ ನಿಮಗೆ ತಿಳಿದಿರಬಹುದು. ಇದನ್ನು ಪೂಜೆ ಮಾಡುವಾಗ ಅಥವಾ ಹೋಮ- ಹವನಾದಿಗಳನ್ನು ಮಾಡುವಾಗ ಉಪಯೋಗಿಸಲಾಗುತ್ತದೆ. ಗಣಪನ ದೇವಸ್ಥಾನಗಳಲ್ಲಿ ಗರಿಕೆಯನ್ನು ಯಥೇಚ್ಛವಾಗಿ ಬಳಸಲಾಗುತ್ತದೆ. ಆದರೆ ಇದರ ಆರೋಗ್ಯ ಪ್ರಯೋಜನಗಳ ಬಗ್ಗೆ ನಿಮಗೆ ತಿಳಿದಿದೆಯಾ? ಇದರ ಸೇವನೆಯಿಂದ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳಿವೆ. ಕಳೆಯಂತೆ ಬೆಳೆಯುವ ಈ ಸಸಿಯು ನಿಮ್ಮ ಆರೋಗ್ಯ ಸಮಸ್ಯೆಗಳನ್ನು ಹೇಗೆ ನಿವಾರಣೆ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳಿ. ವ್ಯಕ್ತಿಯ ದೇಹದಲ್ಲಿ ಉತ್ತಮವಾದ ರೋಗನಿರೋಧಕ ಶಕ್ತಿ ಇದ್ದರೆ ಸಾಕಷ್ಟು ಅನಾರೋಗ್ಯಗಳಿಂದ ದೂರ ಇರಬಹುದು. ಗರಿಕೆ ಹುಲ್ಲಿನಲ್ಲಿ ಸಿಡಿಪಿಎಫ್(ಸಿನೊಡಾನ್ ಡ್ಯಾಕ್ಟಿಲಾನ್ ಪ್ರೋಟೀನ್) ಇರುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವುದು. ಇಮ್ಯೂನೊಮೊಡ್ಯುಲೇಟರಿ ಚಟುವಟಿಕೆಯನ್ನು ತೀವ್ರಗೊಳಿಸುವುದು. ಆಗ ನಮ್ಮ ದೇಹವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು. ಜೊತೆಗೆ ವಿವಿಧ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುವುದು. ಗರಿಕೆ ಹುಲ್ಲಿಗೆ ಸ್ವಲ್ಪ ಅರಿಶಿನವನ್ನು ಸೇರಿಸಿ ಪೇಸ್ಟ್ ಮಾಡಿ ದೇಹಕ್ಕೆ ಉಜ್ಜಿಕೊಂಡು ಒಂದು ಗಂಟೆ ಬಿಟ್ಟು ನಂತರ ಸ್ನಾನ ಮಾಡಿ. ಇದರಿಂದ ದೇಹದ ತುರಿಕೆ ನಿವಾರಣೆಯಾಗುತ್ತದೆ. ಮೂತ್ರಕೋಶದ ಕಲ್ಲುಗಳು, ದೇಹದ ಊತ, ಮಕ್ಕಳಲ್ಲಿ ದೀರ್ಘಕಾಲದ ನೆಗಡಿ, ಮೂಗು ಸೋರುವಿಕೆ, ಅತಿಸಾರ, ಕಣ್ಣಿನ ದೋಷ, ಮೆದುಳಿನ ರಕ್ತಸ್ರಾವದಂತಹ ಕಾಯಿಲೆಗಳಿಗೆ ಈ ರಸ ತುಂಬಾ ಒಳ್ಳೆಯದು. ರಕ್ತವನ್ನು ಶುದ್ಧವಾಗಿ ಇಟ್ಟು ಕೊಳ್ಳಲು ಗರಿಕೆ ಹುಲ್ಲಿನ ಸೇವನೆ ಮಾಡಿ. ಗರಿಕೆ ಹುಲ್ಲಿನ ರಸವನ್ನು ಒಂದು ಲೋಟ ಉಗುರು ಬೆಚ್ಚಗಿನ ನೀರಿನಲ್ಲಿ ಹಾಕಿ ಬೆರೆಸಿ ಸೇವನೆ ಮಾಡುವುದು ಒಳ್ಳೆಯದು. ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳನ್ನು ದೂರ ಮಾಡುವಲ್ಲಿ ಗರಿಕೆ ಹುಲ್ಲು ಅದ್ಭುತವಾಗಿ ಕೆಲಸ ಮಾಡುತ್ತದೆ. ಇದು ನಮ್ಮ ದೇಹದ ವಿಷಕಾರಿ ಅಂಶಗಳನ್ನು ದೂರವಾಗಿಸುವುದರ ಜೊತೆಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ನಮ್ಮ ಕರುಳಿನ ಕಾರ್ಯ ಚಟುವಟಿಕೆಯನ್ನು ವೃದ್ಧಿಸುತ್ತದೆ. ಮುಖ್ಯವಾಗಿ ಗ್ಯಾಸ್ಟ್ರಿಕ್ ಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ. ನಮ್ಮ ದೇಹದ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಸರಿಪಡಿಸುವ ಜೊತೆಗೆ ಬೊಜ್ಜು ಮತ್ತು ಇನ್ನಿತರ ತೊಂದರೆಗಳನ್ನು ಹೋಗಲಾಡಿಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಗರಿಕೆ ಸೇವನೆಯಿಂದ ಅಜೀರ್ಣತೆ ಸಮಸ್ಯೆ ಸುಲಭವಾಗಿ ನಮ್ಮಿಂದ ದೂರವಾಗುತ್ತದೆ ಎಂದು ಹೇಳುತ್ತಾರೆ. ಇದರ ಜೊತೆಗೆ ವಸಡುಗಳ ರಕ್ತಸ್ರಾವ ಸಮಸ್ಯೆ ಕೂಡ ಬಗೆಹರಿಯುತ್ತದೆ.
