ಫ್ಲೋರಿಡಾ : ವೃತ್ತಿಪರ ಕುಸ್ತಿ ಸೂಪರ್‌ಸ್ಟಾರ್ ಹಲ್ಕ್ ಹೋಗನ್(71) ಅವರು ಹೃದಯಾಘಾತದಿಂದ ಗುರುವಾರ ನಿಧನರಾಗಿದ್ದಾರೆ.
ವರ್ಲ್ಡ್ ವ್ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್ (WWE)ನ ಅತಿದೊಡ್ಡ ಸ್ಟಾರ್‌ಗಳಲ್ಲಿ ಒಬ್ಬರಾಗಿದ್ದ ಹೋಗನ್ ಅವರು ತಮ್ಮ ಫ್ಲೋರಿಡಾದ ಮನೆಯಲ್ಲಿ ನಿಧನರಾಗಿರುವುದಾಗಿ ವರದಿಯಾಗಿದೆ. ಹೋಗನ್ ಬಹಳ ದಿನಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಅದಕ್ಕಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ ಗುರುವಾರ ಬೆಳಿಗ್ಗೆ 9.51 ರ ಸುಮಾರಿಗೆ, ಹಲ್ಕ್ ಹೋಗನ್ ಅವರಿಗೆ ಹೃದಯಾಘಾತ ಸಂಭವಿಸಿದೆ. ಕೂಡಲೇ ವೈದ್ಯಕೀಯ ತಂಡವನ್ನು ಮನೆಗೆ ಕರೆಸಿ, ಬಳಿಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆಸ್ಪತ್ರೆ ತಲುಪುವ ಮುನ್ನವೇ ಮೃತಪಟ್ಟಿರುವುದಾಗಿ ವರದಿಯಾಗಿದೆ.
1953 ರ ಆಗಸ್ಟ್ 11ರಂದು ಜಾರ್ಜಿಯಾದ ಆಗಸ್ಟಾದಲ್ಲಿ ಹೋಗನ್ ಜನಿಸಿದರು. ಹೋಗನ್ ಅವರ ನಿಜವಾದ ಹೆಸರು ಟೆರ್ರಿ ಜೀನ್ ಬೊಲಿಯಾ. 1977 ರಲ್ಲಿ ವೃತ್ತಿಪರ ಕುಸ್ತಿ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು, 1983 ರಲ್ಲಿ WWE ಗೆ ಪ್ರವೇಶಿಸುತ್ತಾರೆ. ಹೋಗನ್ ತಮ್ಮ WWE ವೃತ್ತಿಜೀವನದಲ್ಲಿ ಆರು ಬಾರಿ WWE ಚಾಂಪಿಯನ್‌ಶಿಪ್ ಮತ್ತು ಆರು ಬಾರಿ WCW ವರ್ಲ್ಡ್ ಹೆವಿವೇಟ್ ಚಾಂಪಿಯನ್‌ಶಿಪ್ ಗೆದ್ದಿದ್ದಾರೆ. ಅನೇಕ ಪ್ರಸಿದ್ಧ ಕುಸ್ತಿಪಟುಗಳನ್ನು ಸೋಲಿಸುವ ಮೂಲಕ ಹೋಗನ್ ಅವರು 1980 ರ ದಶಕವನ್ನು ಸಂಪೂರ್ಣವಾಗಿ ಆಳಿದರು.
ಮೊದಲ 9 ರೆಸಲ್‌ಮೇನಿಯಾ ಈವೆಂಟ್‌ಗಳಲ್ಲಿ 8 ರಲ್ಲಿ ಹೋಗನ್ ಭಾಗವಹಿಸಿದ್ದರು. 2012 ರ ಜನವರಿಯಲ್ಲಿ ಹೋಗನ್ ಕುಸ್ತಿಯಿಂದ ನಿವೃತ್ತರಾಗುತ್ತಾರೆ. ಅವರು ಅನೇಕ ಹಾಲಿವುಡ್ ಚಲನಚಿತ್ರಗಳಲ್ಲಿ, ರಿಯಾಲಿಟಿ ಶೋಗಳಲ್ಲಿ ಹಾಗೂ ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಜೊತೆಗೆ 2005 ರಲ್ಲಿ ಹೋಗನ್ ಅವರನ್ನು WWE ಹಾಲ್ ಆಫ್ ಫೇಮ್‌ಗೆ ಸೇರಿಸಲಾಗಿತ್ತು. ಇನ್ನು ಹೋಗನ್ ಅವರ ನಿಧನಕ್ಕೆ ಪ್ರಪಂಚದಾದ್ಯಂತ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.