ಹಿರಿಯೂರು: ಸಮಾಜದಲ್ಲಿ ಶಿಕ್ಷಣದ ಮೂಲಕ ಮಹಿಳೆಯರಿಗೆ ಸಮಾನತೆ ಮತ್ತು ನ್ಯಾಯ ಸ್ಥಾಪಿಸಲು ಸಾವಿತ್ರಿಬಾಯಿ ಪುಲೆ ಅವರು ಮಾಡಿರುವ ಸೇವೆ ಅನನ್ಯ ಹಾಗೂ ಅವರ ಆದರ್ಶ ಜೀವನ ಇಂದಿನ ಪೀಳಿಗೆಗೆ ಮಾರ್ಗದರ್ಶಕವಾಗಿದೆ ಎಂದು ಯರಬಳ್ಳಿ ಪಿಎಂಶ್ರೀ ಸರ್ಕಾರಿ ಮಾದರಿ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಸವಿತಾ ಅಭಿಪ್ರಾಯ ಪಟ್ಟಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯಾಧಿರಿಗಳ ಕಛೇರಿ ಹಿರಿಯೂರು ಇವರ ಸಹಯೋಗದೊಂದಿಗೆ ತಾಲ್ಲೂಕಿನ ಯರಬಳ್ಳಿ ಗ್ರಾಮದ ಪಿಎಂಶ್ರೀ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಭಾರತದ ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಪುಲೆಯವರ 195ನೇ ಜನ್ಮದಿನಾಚರಣೆ ಹಾಗೂ ಪೋಷಕರು ಮತ್ತು ಶಿಕ್ಷಕರ ಮಾಸಿಕ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿ ಸಾವಿತ್ರಿಬಾಯಿ ಫುಲೆಯವರು ಭಾರತದ ಸಮಾಜ ಸುಧಾರಣಾ ಇತಿಹಾಸದಲ್ಲಿ ಒಂದು ಅಪ್ರತಿಮ ಶಕ್ತಿ. ಕೇವಲ ಅಕ್ಷರ ಕಲಿಸುವುದಷ್ಟೇ ಅಲ್ಲದೆ, ಅಂದಿನ ಸಮಾಜದಲ್ಲಿ ಆಳವಾಗಿ ಬೇರೂರಿದ್ದ ಅನೇಕ ಅನಿಷ್ಟ ಪದ್ಧತಿಗಳ ವಿರುದ್ಧ ಅವರು ಸಮರ ಸಾರಿದ್ದರು
ಅಸ್ಪೃಶ್ಯತೆ ತಾಂಡವವಾಡುತ್ತಿದ್ದ ಕಾಲದಲ್ಲಿ ಶೂದ್ರ ಮತ್ತು ಅತಿ-ಶೂದ್ರ ವರ್ಗದ ಮಕ್ಕಳಿಗಾಗಿ 18ಕ್ಕೂ ಹೆಚ್ಚು ಶಾಲೆಗಳನ್ನು ತೆರೆದು ಉಚಿತ ಶಿಕ್ಷಣವನ್ನು ನೀಡಿ ದಿಟ್ಟ ಮಹಿಳೆಯಾದ ಸಾವಿತ್ರಿಬಾಯಿ ಪುಲೆಯವರು ಎಲ್ಲಾ ಶಿಕ್ಷಕರಿಗೆ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.
ಇದಕ್ಕೂ ಮೊದಲು ಪೋಷಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಲೆಯ ಹಿರಿಯ ಶಿಕ್ಷಕ ನೀಲಕಂಠಪ್ಪ ಮಗುವಿನ ಸಂಪೂರ್ಣ ಬೆಳವಣಿಗೆಗೆ ಶಾಲೆಯಷ್ಟೇ ಮನೆಯೂ ಮಹತ್ವದ ಕಲಿಕಾ ಕೇಂದ್ರ. ಶಾಲೆಯಲ್ಲಿ ಕಲಿತದ್ದು ಮನೆಯಲ್ಲಿ ಪುನರಾವರ್ತನೆಯಾಗಬೇಕು, ಪೋಷಕರ ಪ್ರೀತಿ-ಬೆಂಬಲದೊಂದಿಗೆ ಅದಕ್ಕೆ ಅರ್ಥ ತುಂಬಬೇಕು. ಈ ದೃಷ್ಟಿಯಿಂದ ಪೋಷಕರ-ಶಿಕ್ಷಕರ ಸಭೆ ಕೇವಲ ಸಭೆಯಾಗಿ ಉಳಿಯದೆ ಎಲ್ಲರೂ ಒಟ್ಟಾಗಿ ಮಕ್ಕಳ ಭವಿಷ್ಯವನ್ನು ರೂಪಿಸುವ ಸಂವಾದ ವೇದಿಕೆಯಾಗಬೇಕು ಇದಕ್ಕೆ ಶಾಲೆಯ ಎಲ್ಲಾ ಮಕ್ಕಳ ಎಲ್ಲಾ ತಂದೆಯಾಂದಿರು ಕುಟುಂಬದ ಸದಸ್ಯರು ಸಭೆಯಲ್ಲಿ ಭಾಗವಿಸಿ ಮಕ್ಕಳ ಭವಿಷ್ಯವನ್ನು ರೂಪಿಸಬೇಕಿದೆ ಎಂದರು.
ಈಗಾಗಲೇ ಶೈಕ್ಷಣಿಕ ಮಾರ್ಗದರ್ಶಿ ಹಾಗೂ ಇಲಾಖೆಯ ಆದೇಶದಂತೆ ಎರಡು ಪೋಷಕ-ಶಿಕ್ಷಕರ ಸಭೆಯನ್ನು ಹಾಗೂ ಒಂದು ಸಮುದಾಯದತ್ತ ಶಾಲೆಯನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ. ಈ ಸಭೆಯ ಮೂಲಕ ಶಾಲಾಭಿವೃದ್ಧಿಯಲ್ಲಿ SDMC ಸದಸ್ಯರ ಪಾತ್ರ, ಮಕ್ಕಳ ಕಲಿಕಾ ಪ್ರಗತಿ, ಮನೆಯಲ್ಲಿ ಕಲಿಕಾ ವಾತಾವರಣ ನಿರ್ಮಾಣ, ಪೋಷಕರ ಪಾತ್ರಗಳನ್ನು ಚರ್ಚಿಸಿ ಶಾಲೆಯ ಮಕ್ಕಳ ಅಭಿವೃದ್ಧಿಗೆ ಶ್ರಮಿಸಬೇಕಿದೆ ಮಕ್ಕಳು ಶಿಕ್ಷಣದಲ್ಲಿ ಅಭಿವೃದ್ಧಿ ಹೊಂದಿದರೆ ಇಡೀ ಶಾಲೆಯೇ ಅಭಿವೃದ್ಧಿ ಹೊಂದುತ್ತದೆ ಎಂದು ತಿಳಿಸಿದರು.
ಸಂಗೀತ ಶಿಕ್ಷಕಿ ಶ್ರೀಮತಿ ತ್ರಿವೇಣಿಯವರ ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಸಾವಿತ್ರಿಬಾಯಿ ಪುಲೆಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು ಆಂಗ್ಲಭಾಷಾ ಕಾರ್ಯಕ್ರಮವನ್ನು ಶಿಕ್ಷಕ ಮಂಜುನಾಥ್ ನಿರೂಪಿಸಿದರೆ, ಸಹಶಿಕ್ಷಕಿ ಶಾರದ ಎಲ್ಲರನ್ನೂ ಸ್ವಾಗತಿಸಿದರು ಸಮಾಜ ಶಿಕ್ಷಕ ಸಂತೋಷ್ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪೋಷಕರ ಪಾತ್ರಕುರಿತು ಮಾತನಾಡಿದರು ಹಾಗೂ ಎಸ್ಡಿಎಂಸಿ ಅಧ್ಯಕ್ಷ ತಿಪ್ಪೇಸ್ವಾಮಿ ಉಪಾಧ್ಯಕ್ಷೆ ಸುಮಲತಾ ಸಹಶಿಕ್ಷಕರಾದ ಶಬಾನ, ದರ್ಶನ್, ಲಿಂಗರಾಜ್, ಕಲಾ ಶಿಕ್ಷಕ ವೀರೇಂದ್ರ, ಅನಸೂಯಾ ಹಾಗೂ ಹಲವಾರು ಮಕ್ಕಳ ಪೋಷಕರು ಭಾಗವಹಿಸಿದ್ದರು.
































