ಬೆಂಗಳೂರು: ರಾಜ್ಯ ರಾಜಕಾರಣವನ್ನೇ ಬೆಚ್ಚಿ ಬೀಳಿಸಿರುವ ಹನಿಟ್ರ್ಯಾಪ್ ಪ್ರಕರಣವು ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆದುಕೊಳ್ತಿದೆ. ಕಾಂಗ್ರೆಸ್ ಸಚಿವ ಕೆಎನ್ ರಾಜಣ್ಣ ಅವರೇ ಸದನದಲ್ಲಿ ಹನಿಟ್ರ್ಯಾಪ್ ಬಗ್ಗೆ ಹೇಳಿಕೆ ನೀಡಿ ಶಾಕ್ ಕೊಟ್ಟ ಬೆನ್ನಲ್ಲೇ ರಾಜಕೀಯವ ವಲಯದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ. ನಿನ್ನೆಯಷ್ಟೇ ಹನಿಟ್ರ್ಯಾಪ್ ಬಗ್ಗೆ ಹಲವು ಮಹತ್ವದ ವಿಚಾರಗಳನ್ನು ಬಹಿರಂಗಪಡಿಸಿದ್ದ ಕೆಎನ್ ರಾಜಣ್ಣ ಅವರು ಯುವತಿಯೊಬ್ಬಳು ಹೈಕೋರ್ಟ್ ವಕೀಲೆ ಎಂದು ಹೇಳಿಕೊಂಡು ಬಂದಿದ್ದಾಗಿ ತಿಳಿಸಿದ್ದರು. ಈಗ ಸಿದ್ದರಾಮಯ್ಯ ಪುತ್ರ ಹಾಗೂ ಕಾಂಗ್ರೆಸ್ ಎಂಎಲ್ಸಿ ಯತೀಂದ್ರ ಸಿದ್ದರಾಮಯ್ಯ ಅವರು ಹೊಸ ಬಾಂಬ್ ಸಿಡಿಸಿದ್ದಾರೆ.
ಕೆಲವರು ಹನಿಟ್ರ್ಯಾಪ್ ಮಾಡಬೇಕು ಎಂಬ ಕಾರಣಕ್ಕೆ ಸಚಿವರ ಮನೆಗಳಿಗೆ ಬರ್ತಾರೆ. ಹಾಗಾಗಿ ಸಚಿವರ ಮನೆಗಳಿಗೆ ಸಿಸಿಟಿವಿ ಹಾಕಿಸಲೇಬೇಕು. ಇನ್ನು ಸಚಿವರ ಮನೆಗಳಲ್ಲಿ ಸಿಸಿಟಿವಿ ಇಲ್ಲ ಎನ್ನುವ ವಿಚಾರದ ಬಗ್ಗೆ ನನಗೆ ಅಷ್ಟಾಗಿ ಗೊತ್ತಿಲ್ಲ. ಆದರೆ ತಂದೆ ಸಿಎಂ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಸಿಸಿಟಿವಿ ಇದೆ. ನಾನು ಕೂಡ ಅಲ್ಲೇ ಇರುವುದರಿಂದ ಇದರ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ಆದರೆ, ಬೇರೆಯವರ ಮನೆಗಳಲ್ಲಿ ಸಿಸಿಟಿವಿ ಇಲ್ಲದ ವಿಚಾರ ಗೊತ್ತಿಲ್ಲ ಎಂದು ಯತೀಂದ್ರ ಹೇಳಿದ್ದಾರೆ.
ಇನ್ನು ಬಿಜೆಪಿಯವರ ವಿಚಾರಕ್ಕೆ ಬಂದರೆ, ಬಿಜೆಪಿಯಲ್ಲೇ ಹಲವು ಹನಿಟ್ರ್ಯಾಪ್ಗಳು ನಡೆದಿವೆ. ಬಿಜೆಪಿಯ ನಾಯಕರ ವಿಡಿಯೋಗಳನ್ನ ಬಿಜೆಪಿ ಪಕ್ಷದವರೇ ಮಾಡಿಕೊಂಡು ಇಟ್ಟಿದ್ದಾರೆ. ವಿಡಿಯೋವನ್ನ ಬಿಜೆಪಿಯವರೇ ಮಾಡಿಕೊಂಡು ಇಟ್ಟಿದ್ದಾರೆ. ಈ ಕಾರಣಕ್ಕಾಗಿಯೇ ಕೆಲ ಬಿಜೆಪಿ ಶಾಸಕರು, ಮಾಜಿ ಮುಖ್ಯಮಂತ್ರಿ ಸೇರಿದಂತೆ ಹಲವು ಬಿಜೆಪಿ ನಾಯಕರು ಕೋರ್ಟ್ನಿಂದ ಸ್ಟೇ ತಂದಿದ್ದಾರೆ. ಅವರ ಕಥೆಯೇ ಹೀಗಿರುವಾಗ ಬಿಜೆಪಿಯವರಿಗೆ ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಚಿವರ ಸರ್ಕಾರಿ ನಿವಾಸಗಳಲ್ಲಿ ಸಿಸಿಟಿವಿ ಇಲ್ಲ ಎನ್ನುವ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ಸಿಎಂ ಸಿದ್ದರಾಮಯ್ಯ ಅವರ ಮನೆಗೆ ಪೊಲೀಸ್ ಬಂದೂಬಸ್ತ್ ಕೂಡ ಬಿಗಿಯಾಗಿದೆ. ಇಲ್ಲಿಗೆ ಯಾರೇ ಬಂದರೂ ವಿಡಿಯೋ ರೆಕಾರ್ಡ್ ಆಗು ತ್ತದೆ. ಹಾಗಾಗಿ ಉಳಿದ ಸಚಿವರ ಮನೆಗೂ ಸಿಸಿಟಿವಿ ಕ್ಯಾಮರಾ ಹಾಕಲೇಬೇಕು. ಏಕೆಂದರೆ, ಸಿಸಿಟಿವಿ ಇದ್ದರೆ ಹನಿಟ್ರ್ಯಾಪ್ ಮಾಡುವವರ ಮೇಲೆ ನಿಗಾ ಇಡಬಹುದು ಎಂದೂ ಯತೀಂದ್ರ ಹೇಳಿದ್ದಾರೆ.
ಇನ್ನು ಸದನದಲ್ಲಿ ಕಾಂಗ್ರೆಸ್ ನಾಯಕರು ಬಿಜೆಪಿ ಶಾಸಕ ಬನಸಗೌಡ ಪಾಟೀಲ್ ಯತ್ನಾಳ್ ಅವರಿಗೆ ಚೀಟಿ ಕೊಟ್ಟ ವಿಚಾರ ಕುರಿತು ಮಾತನಾಡಿ, ನಮ್ಮ ಕಾಂಗ್ರೆಸ್ ನಾಯಕರು ಸದನದಲ್ಲಿ ಹನಿಟ್ರ್ಯಾಪ್ ಬಗ್ಗೆ ಮಾತನಾಡಿರುವುದು ಮಾತ್ರ ನನಗೆ ಗೊತ್ತಿದೆ. ಅದರ ಬಗ್ಗೆ ಮಾತ್ರ ನಾನು ಮಾತನಾಡಬಹುದು, ಆದರೆ ಯತ್ನಾಳ್ ಅವರಿಗೆ ಚೀಟಿ ಕೊಟ್ಟಿದ್ದು ಯಾರು ಎಂಬ ವಿಚಾರವೇ ನನಗೆ ಗೊತ್ತಿಲ್ಲ ಎಂದಿದ್ದಾರೆ. ಸದ್ಯ ಹನಿಟ್ರ್ಯಾಪ್ ವಿಚಾರವಾಗಿ ಕಾಂಗ್ರೆಸ್ ನಾಯಕರು ಬಿಜೆಪಿ ಮೇಲೆ, ಬಿಜೆಪಿ ನಾಯಕರು ಕಾಂಗ್ರೆಸ್ ಮೇಲೆ ಆರೋಪಗಳನ್ನು ಮಾಡುತ್ತಿದ್ದು, ಈ ಜಾಲದಲ್ಲಿ ಯಾರೆಲ್ಲ ಸಿಲುಕಿದ್ದಾರೆ ಎಂಬುದು ತನಿಖೆಯಿಂದ ಮಾತ್ರ ಹೊರಬರಲಿದೆ.