ಬೆಂಗಳೂರು : 20 ವರ್ಷಗಳಿಂದ ನೀವೇ ಮುಡಾ ಸದಸ್ಯರಾಗಿದ್ದೀರಿ. ಆದ್ರೂ ಯಾಕಿಂಗಾಯ್ತು. ಇಷ್ಟೆಲ್ಲಾ ಅವ್ಯವಸ್ಥೆ ಯಾಕಾಯ್ತು ಎಂದು ಬಿಜೆಪಿ-ಜೆಡಿಎಸ್-ಕಾಂಗ್ರೆಸ್ ಶಾಸಕರುಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನಿಸಿದರು.
ಗೃಹ ಕಚೇರಿ ಕೃಷ್ಣದಲ್ಲಿ ಮೈಸೂರು ಅಭಿವೃದ್ಧಿ ಸಂಬಂಧ ಜಿಲ್ಲೆಯ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರುಗಳ ಜೊತೆ ನಡೆದ ಸಭೆಯಲ್ಲಿ ಮೇಲಿನಂತೆ ಪ್ರಶ್ನಿಸಿದರು.ಮೈಸೂರಿನ ಖಾಸಗಿ ಬಡಾವಣೆಗಳಲ್ಲಿನ ಮೂಲಭೂತ ಸವಲತ್ತುಗಳ ಕೊರತೆ, ಕಳಪೆ ನಿರ್ವಹಣೆ, ನೀರು-ಒಳಚರಂಡಿ ವ್ಯವಸ್ಥೆ ಸರಿಯಾಗಿ ಇಲ್ಲದಿರುವ ಬಗ್ಗೆ ಶಾಸಕರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಅಲ್ರೀ ಎಲ್ಲಾ ಪಕ್ಷದ ಶಾಸಕರು ನೀವುಗಳೇ ಸುಮಾರು 20 ವರ್ಷಗಳಿಂದ ಮುಡಾ ಸದಸ್ಯರಿದ್ದೀರಿ. ನೀವುಗಳು ಸದಸ್ಯರಾಗಿದ್ದೂ ಯಾಕಿಂಗಾಯ್ತು? ಯಾಕೆ ಅವ್ಯವಸ್ಥೆ ಆಗಲು ಬಿಟ್ಟಿದ್ದೀರಿ ಎಂದು ಮುಖ್ಯಮಂತ್ರಿಗಳು ಕೇಳಿದರು.
ಹೊಸ ಬಡಾವಣೆ ಮಾಡುವಾಗ ವಿದ್ಯುತ್ ಸಂಪರ್ಕ, ರಸ್ತೆ, ಒಳಚರಂಡಿ ಇತ್ಯಾದಿ ಸೌಲಭ್ಯಗಳನ್ನು ಕಲ್ಪಿಸುವುದು ಬಡಾವಣೆ ಅಭಿವೃದ್ಧಿ ಮಾಡುವವರ ಜವಾಬ್ದಾರಿ. ಬಳಿಕ ಅದನ್ನು ನಗರ ಸ್ಥಳೀಯ ಸಂಸ್ಥೆಗೆ ಹಸ್ತಾಂತರಿಸಬೇಕಾಗಿತ್ತು. ಆದರೆ ಇಂತಹ ಸುಮಾರು 950 ಬಡಾವಣೆಗಳನ್ನು ಹಸ್ತಾಂತರಿಸದೇ ಇರುವುದರಿಂದ ಸಮಸ್ಯೆ ಮುಂದುವರೆದಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.ಬಳಿಕ ನಗರಪಾಲಿಕೆ, ಮುಡಾ ಕುರಿತಾಗಿ ಪ್ರತ್ಯೇಕ ಸಭೆ ಕರೆಯಲು ಮುಖ್ಯಮಂತ್ರಿಗಳು ಸೂಚನೆ ನೀಡಿದರು.
ಮೈಸೂರು ವಿಮಾನ ನಿಲ್ದಾಣ ವಿಸ್ತರಣೆ ಯೋಜನೆ ತ್ವರಿತವಾಗಿ ಆಗದೆ ಕುಂಟುತ್ತಿರುವ ಬಗ್ಗೆ ಕೇಂದ್ರದ ಮತ್ತು ರಾಜ್ಯದ ಅಧಿಕಾರಿಗಳನ್ನು ಪ್ರಶ್ನಿಸಿದ ಮುಖ್ಯಮಂತ್ರಿಗಳು ಈ ಬಗ್ಗೆ ಕೇಂದ್ರದ ಸಚಿವರಿಗೆ ವಿವರವಾದ ಪತ್ರ ಬರೆಯಲು ಮತ್ತು ಅನುಷ್ಠಾನ ಕುರಿತು ಕೇಂದ್ರ ವಿಮಾನಯಾನ ಸಚಿವರನ್ನು ಜ 15 ರಂದು ಭೇಟಿಯಾಗಿ ಮಾತುಕತೆ ನಡೆಸಲು ತೀರ್ಮಾನಿಸಿದರು.