ಬೆಂಗಳೂರು : ವ್ಯಾಟ್ಸಾಪ್ ಬಳಕೆದಾರರಿಗೆ ಇದೀಗ ಮತ್ತೊಂದು ಕಂಟಕ ಶುರುವಾಗಿದೆ. “ಘೋಸ್ಟ್ ಪೇರಿಂಗ್” ಎಂಬ ಹೊಸ ಸೈಬರ್ ವಂಚನೆ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ನಿಮ್ಮ ಲ್ಯಾಪ್‌ಟಾಪ್, ಡೆಸ್ಕ್‌ಟಾಪ್ ಅಥವಾ ಮೊಬೈಲ್‌ನಲ್ಲಿ ವ್ಯಾಟ್ಸಾಪ್‌ನ್ನು ಬಳಸುವಾಗ, ತಕ್ಷಣವೇ ಸೆಟ್ಟಿಂಗ್ಸ್ ಪರಿಶೀಲಿಸಿ ನಿಮ್ಮ ಖಾತೆ ಎಷ್ಟು ಕಡೆ ಪೇರಿಂಗ್ ಆಗಿದೆ ಎಂದು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ.
ಜೇನ್ ಡಿಜಿಟಲ್ ಸಂಸ್ಥೆಯವರು ಈ ವಂಚನೆಯ ಕುರಿತು ಎಚ್ಚರಿಕೆ ನೀಡಿದ್ದು, ಬಳಕೆದಾರರು ತಮ್ಮ ಖಾತೆ ತಿಳಿಯದೆ ಪೇರಿಂಗ್ ಆಗುವ ಸಾಧ್ಯತೆಯನ್ನು ತಡೆಯಬೇಕು ಎಂದು ತಿಳಿಸಿದ್ದಾರೆ. ಈ “ಘೋಸ್ಟ್ ಪೇರಿಂಗ್” ಮೂಲಕ ಯಾವುದೇ ಒಟಿಪಿ ಅಥವಾ ಪಾಸ್‌ವರ್ಡ್ ಇಲ್ಲದೆ ನಿಮ್ಮ ವ್ಯಾಟ್ಸಾಪ್ ಖಾತೆ ವಂಚಕರ ಬಳಿ ಲಿಂಕ್ ಆಗಬಹುದು. ವಂಚಕರು ರಿಯಲ್ ಟೈಮ್‌ನಲ್ಲಿ ನಿಮ್ಮ ಚಾಟ್, ಫೋಟೋ, ವೀಡಿಯೊ ಮತ್ತು ಮಾಹಿತಿ ಓದಲು ಸಾಧ್ಯವಾಗುತ್ತದೆ.
ಸೈಬರ್ ವಂಚಕರು ಸಾಮಾನ್ಯವಾಗಿ ನಕಲಿ ಹೆಸರು ಬಳಸಿಕೊಂಡು ಬಳಕೆದಾರರಿಗೆ ಮೆಸೇಜ್ ಕಳುಹಿಸುತ್ತಾರೆ. ತಮ್ಮ ಫೋಟೋ ಅಥವಾ ನಕಲಿ ಫೋಟೋ ಜೊತೆಗೆ ಲಿಂಕ್ ಕಳುಹಿಸಿ, “ಈ ಫೋಟೋ ನಾನು ಈಗ ನೋಡಿದೆ, ಚೆನ್ನಾಗಿದೆ” ಎಂಬ ಸಂದೇಶ ನೀಡುತ್ತಾರೆ. ಬಳಕೆದಾರರು ಲಿಂಕ್ ಓಪನ್ ಮಾಡಿದರೆ, ಅವರ ವ್ಯಾಟ್ಸಾಪ್ ಖಾತೆ ತುರ್ತು ಹ್ಯಾಕ್ ಆಗಿ, ಸೈಬರ್ ವಂಚಕರೊಂದಿಗೆ ಪೇರಿಂಗ್ ಆಗುತ್ತದೆ. ವಂಚಕರು ಪ್ರಾರಂಭದಲ್ಲಿ ವ್ಯಕ್ತಿಯ ಅಥವಾ ಕುಟುಂಬದ ಫೋಟೋ ಮತ್ತು ವೀಡಿಯೊಗಳನ್ನು ಕಳುಹಿಸಿ, ಬಳಕೆದಾರರಲ್ಲಿ ಅನುಮಾನ ಮೂಡದಂತೆ ಮತ್ತೊಂದು ಲಿಂಕ್ ಕಳುಹಿಸುತ್ತಾರೆ.
ಜೇನ್ ಡಿಜಿಟಲ್ ಸಂಸ್ಥೆಯವರು ಈ ವಂಚನೆಯ ಬಗ್ಗೆ ವ್ಯಾಪಕ ಎಚ್ಚರಿಕೆ ನೀಡಿದ್ದು, ಅಪರಿಚಿತ ಲಿಂಕ್ ಕ್ಲಿಕ್ ಮಾಡುವುದನ್ನು ತಪ್ಪಿಸಬೇಕು, 2 ಸ್ಟೆಪ್ಸ್ ವೆರಿಫಿಕೇಶನ್ ಆನ್ ಮಾಡಿಕೊಳ್ಳಬೇಕು ಮತ್ತು ವ್ಯಾಟ್ಸಾಪ್ ಅಪ್‌ಡೇಟ್‌ಗಳನ್ನು ಸಮಯಕ್ಕೆ ತಕ್ಕಂತೆ ನವೀಕರಿಸುವುದು ಸುರಕ್ಷತೆಗಾಗಿ ಬಹಳ ಮುಖ್ಯವಾಗಿದೆ ಎಂದು ತಿಳಿಸಿದ್ದಾರೆ.
ಈ ಘೋಸ್ಟ್ ಪೇರಿಂಗ್ ಸ್ಕ್ಯಾಮ್ ನಿಂದ ಬಳಕೆದಾರರ ವೈಯಕ್ತಿಕ ಮಾಹಿತಿ, ಫೋಟೋ, ವೀಡಿಯೊ ಹಾಗೂ ಚಾಟ್ ಮಾಹಿತಿಗಳು ಲೀಕ್ ಆಗುವ ಭೀತಿ ಇದೆ. ಆದ್ದರಿಂದ, ಯಾವುದೇ ಸಂದೇಶವನ್ನು ಅನುಮಾನವಾಗದಿದ್ದರೂ, ಸಂದೇಶ ಕಳುಹಿಸಿದ ವ್ಯಕ್ತಿಯನ್ನು ಖಚಿತಪಡಿಸಿಕೊಳ್ಳುವುದು ಹಾಗೂ ಲಿಂಕ್ ಕ್ಲಿಕ್ ಮಾಡುವುದನ್ನು ತಪ್ಪಿಸುವುದು ಅತ್ಯಂತ ಅಗತ್ಯವಾಗಿದೆ.
































