ಕಣ್ಣೂರು : ಜಿಲ್ಲೆಯ ಶ್ರೀನಂದಾ ಎಂಬ 18 ವರ್ಷದ ಯುವತಿ, ತೂಕ ಹೆಚ್ಚಾಗುವ ಭಯದಿಂದ ತೀವ್ರ ಆಹಾರ ಪದ್ಧತಿ ಮತ್ತು ದೀರ್ಘಕಾಲದ ಹಸಿವಿನಿಂದ ಉಂಟಾದ ಆರೋಗ್ಯ ಸಮಸ್ಯೆಗಳಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಯುವತಿ ಕೂತುಪರಂಬದ ನಿವಾಸಿಯಾಗಿದ್ದು, ತಲಶ್ಶೇರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನಿಧನಳಾಗಿದ್ದಾಳೆ ಎಂದು ಹೇಳಲಾಗಿದೆ. ಆಸ್ಪತ್ರೆಯಲ್ಲಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದಕ್ಕೂ ಮೊದಲು, ಆಕೆ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿಯೂ ಚಿಕಿತ್ಸೆ ಪಡೆದಿದ್ದರು.
ಶ್ರೀನಂದಾ ತೂಕ ಹೆಚ್ಚಾಗುವ ಭಯದಿಂದ ಊಟ ಬಿಟ್ಟು ಹೆಚ್ಚು ವ್ಯಾಯಾಮ ಮಾಡುತ್ತಿದ್ದರು ಎಂದು ಆಕೆಯ ಕುಟುಂಬದವರು ತಿಳಿಸಿದ್ದಾರೆ. ಆನ್‌ಲೈನ್ ವೆಬ್‌ಸೈಟ್‌ಗಳಿಂದ ಬಂದ ಆಹಾರ ಪದ್ಧತಿಯನ್ನು ಅನುಸರಿಸುತ್ತಿದ್ದ ಆಕೆ ಕೇವಲ ನೀರು ಮಾತ್ರ ಕುಡಿಯುತ್ತಿದ್ದಳು ಎಂದು ಹೇಳಲಾಗಿದೆ. ಇದರಿಂದಾಗಿ ಆಕೆ ತೀವ್ರ ಹಸಿವಿನಿಂದ ಬಳಲುತ್ತಿದ್ದಳು ಎಂದು ಮನೆಯವರು ಹೇಳಿಕೆ ನೀಡಿದ್ದಾರೆ. ಶ್ರೀನಂದಾ ಮಟ್ಟನ್ನೂರ್ ಪಳಸ್ಸಿರಾಜ ಎನ್‌ಎಸ್‌ಎಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದಳು.
ಶ್ರೀನಂದ ತೂಕ ಹೆಚ್ಚಾಗುವ ಭಯದಿಂದ ಆಹಾರ ತ್ಯೆಜಿಸುವ ಗೀಳಾದ ʻಅನೋರೆಕ್ಸಿಯಾʼ ಎಂಬ ಅಸ್ವಸ್ಥತೆಯಿಂದ ಬಳಲುತ್ತಿದ್ದಳು. ಈ ಖಾಯಿಲೆಯಿಂದ ಬಳಲುತ್ತಿರುವ ಜನ ತೆಳ್ಳಗಿನ ದೇಹವನ್ನು ಹೊಂದಿದ್ದರೂ ಸಹ ಅಧಿಕ ತೂಕ ಹೊಂದಿದ್ದೇವೆ ಎಂದು ಭಾವಿಸುತ್ತಾರೆ. ಇದರಿಂದ ಆಹಾರ ಸೇವಿಸುವುದನ್ನು ಬಿಡುತ್ತಾರೆ ಎಂದು ವೈದ್ಯರು ತಿಳಿಸಿದ್ದಾರೆ.
5 ರಿಂದ 6 ತಿಂಗಳುಗಳಿಂದ ಈ ಸ್ಥಿತಿಯಿಂದ ಬಳಲುತ್ತಿದ್ದಳು. ಕೆಲವು ತಿಂಗಳುಗಳಿಂದ ಏನನ್ನೂ ತಿನ್ನುತ್ತಿರಲಿಲ್ಲ. ಈ ವಿಚಾರವನ್ನು ಅವರ ಕುಟುಂಬ ಸದಸ್ಯರಿಂದ ಆಕೆ ಮುಚ್ಚಿಟ್ಟಿದ್ದಳು. ಸುಮಾರು ಐದು ತಿಂಗಳ ಹಿಂದೆ, ಯುವತಿಯನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಈ ವೇಳೆ ವೈದ್ಯರು ಆಕೆಗೆ ಊಟ ಮಾಡಬೇಕು ಎಂದು ಸಲಹೆ ಕೊಟ್ಟಿದ್ದರು. ಅಲ್ಲದೇ ಮನೋವೈದ್ಯರ ಸಲಹೆ ಪಡೆಯುವಂತೆ ಸೂಚಿಸಿದ್ದರು. ಹಲವು ದಿನಗಳಿಂದ ಯುವತಿ ಕೇವಲ ಬಿಸಿ ನೀರನ್ನು ಮಾತ್ರ ಕುಡಿಯುತ್ತಿದ್ದಳು ಎಂದು ಸಂಬಂಧಿಕರು ತಿಳಿಸಿದ್ದಾರೆ.
ತಲಶ್ಶೇರಿ ಸಹಕಾರಿ ಆಸ್ಪತ್ರೆಯ ವೈದ್ಯ ಡಾ. ನಾಗೇಶ್ ಮನೋಹರ್ ಪ್ರಭು ಅವರು, ಸುಮಾರು 12 ದಿನಗಳ ಹಿಂದೆ ಅವರನ್ನು ತುಂಬಾ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಕರೆತರಲಾಯಿತು ಮತ್ತು ತಕ್ಷಣ ಅವರನ್ನು ಐಸಿಯುಗೆ ದಾಖಲಿಸಲಾಯಿತು ಎಂದು ಹೇಳಿದರು. “ಅವರ ತೂಕ ಕೇವಲ 24 ಕೆಜಿ ಇತ್ತು ಮತ್ತು ಅವರು ನಡೆದಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದರು ಎನ್ನಲಾಗಿದೆ.