ಕಲಬುರಗಿ: ‘ಪ್ರಧಾನಿ ಮೋದಿ ಅವರು ಎಲ್ಲವನ್ನೂ ವಯಕ್ತಿಕವಾಗಿ ಸ್ವೀಕರಿಸುತ್ತಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಮೊದಲು ನಾವು ನಮ್ಮ ನೆರೆಹೊರೆಯ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಬೇಕು. ಕೆಟ್ಟ ಪರಿಸ್ಥಿತಿ ಬಂದಾಗ ನಾವು ಹೋರಾಟ ಮಾಡಲೂ ಸಿದ್ಧರಾಗಬೇಕಾಗುತ್ತದೆ. ಇಂದಿರಾಗಾಂಧಿ ಹೇಗೆ ಪಾಕಿಸ್ತಾನವನ್ನು ಬೇರ್ಪಡಿಸಿ ಬಾಂಗ್ಲಾದೇಶ ನಿರ್ಮಿಸಿದರೋ ಹಾಗೆ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.
ಕಲಬುರಗಿಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಂತರರಾಷ್ಟ್ರೀಯ ನೀತಿ ವಿಚಾರದಲ್ಲಿ ಪ್ರಧಾನಿ ಮೋದಿ ತಮ್ಮ ಮನಸ್ಸಿಗೆ ಬಂದಂತೆ ವರ್ತಿಸುತ್ತಿದ್ದಾರೆ. ಮೋದಿ ಅವರು ಯಾವಾಗ ಯಾರನ್ನು ಬೇಕಾದರೂ ತಬ್ಬಿಕೊಳ್ಳುತ್ತಾರೆ, ಯಾರನ್ನು ಬೇಕಾದರೂ ತೆಗಳುತ್ತಾರೆ. ನಾವು ನಮ್ಮ ನೆರೆಹೊರೆಯ ದೇಶದವರನ್ನು ಬದಲಾಯಿಸಲು ಸಾಧ್ಯವಿಲ್ಲ. ಆದ್ದರಿಂದ ಅವರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಬೇಕು. ನಾವು ಒಂದಾಗಿ ಸಾಗಬೇಕು. ಅವರು ನಮ್ಮ ವಿರುದ್ಧ ತಿರುಗಿ ಬಿದ್ದಾಗ ದೇಶಕ್ಕಾಗಿ ಹೋರಾಟ ಮಾಡಲೂ ಸಿದ್ಧರಾಗಬೇಕಾಗುತ್ತದೆ’ ಎಂದು ತಿಳಿಸಿದರು.
ಇನ್ನು ರಾಜ್ಯದಲ್ಲಿ ಮೂವರು ಡಿಸಿಎಂ ವಿಚಾರದ ಕುರಿತು ಮಾತನಾಡಿದ ಅವರು, ‘ಈ ವಿಚಾರವನ್ನು ನೀವು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರ ಬಳಿ ಕೇಳಿ. ನಮ್ಮ ಮುಂದೆ ಇಂತಹ ಪ್ರಸ್ತಾಪವಿಲ್ಲ. ಇವೆಲ್ಲಾ ಉಹಾಪೋಹದ ವಿಚಾರಗಳು. ಚುನಾವಣೆ ವೇಳೆ ಈ ರೀತಿಯ ವಿಷಯ ಬರಬಾರದು. ಸದ್ಯಕ್ಕೆ ಸರ್ಕಾರ ನಡೆಸುವ ಕಡೆಗೆ, ಸಮಸ್ಯೆಗಳೆಡೆ ಗಮನ ಹರಿಸಬೇಕು. ನಮ್ಮ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರುವೆಡೆಗೆ ಗಮನ ನೀಡಬೇಕು. ನಮ್ಮ ಗುರಿ ತಲುಪುವರೆಗೆ ಇಂತಹದಕ್ಕೆ ಅವಕಾಶ ಕೊಡಬಾರದು’ ಎಂದರು.
				
															
                    
                    
                    
                    































