ಚೈನಾ:ನನ್ನ ಚೈನಾ ಪ್ರವಾಸದಲ್ಲಿ ಪ್ರತಿಬಾರಿಯೂ ಹಾಂಗ್ ಕಾಂಗ್ ತಲುಪುತ್ತಿದ್ದಂತೆ ಈ ಇಬ್ಬರನ್ನು ನೆನೆದು ಭಾವುಕನಾಗುತ್ತೇನೆ. ಒಬ್ಬ ಮಾರ್ಷಲ್ ಆರ್ಟ್ ಕಲಾವಿದ “ಬ್ರೂಸ್ಲಿ” , ಮತ್ತೊಬ್ಬ ಹಾಲಿವುಡ್ ನಟ “ಜಾಕಿ ಚಾನ್”.
ಜಗದ್ವಿಖ್ಯಾತರಾದ ಈ ಇಬ್ಬರೂ ಇದೇ ಊರಿನವರು. ಇಲ್ಲಿಯೇ ಚಿಕ್ಕವಯಸ್ಸಿನಲ್ಲಿ ತುತ್ತು ಅನ್ನಕ್ಕಾಗಿ ಬೀದಿಕಾಳಗ ಮಾಡಿದವರು.
ಪೊಲೀಸರಿಂದ ಒದೆತಿಂದವರು. ಬ್ರೂಸ್ಲಿಯ ಗ್ಯಾಂಗ್ವಾರ್ ಪರಿಗೆ ಬೆಚ್ಚಿದ್ದ ಹಾಂಗ್ ಕಾಂಗ್ ಪೋಲೀಸರು ಅವರಪ್ಪನನ್ನು ಕರೆಸಿ , ಬ್ರೂಸ್ಲಿಯನ್ನು ಊರುಬಿಡಿಸಿದರು.
ಹೊರಡುವಾಗ, ಬ್ರೂಸ್ಲಿಗೆ ಕರಾಟೆ ಹೇಳಿಕೊಡುತ್ತಿದ್ದ ಗುರುವೊಬ್ಬ ಪ್ರೀತಿಯಿಂದ ಹೇಳಿದ್ದ, “ಬ್ರೂಸ್ , ಬೀದಿಯಲ್ಲಿ ಕೋಪದಿಂದ ಆಡುವ ನಿನ್ನ ಹೊಡೆದಾಟವನ್ನ ಸಂಯಮದಿಂದ ಒಂದು ಕೋಣೆಯೊಳಗೆ, ನಾಲ್ಕು ಜನರಿಗೆ ಆತ್ಮರಕ್ಷಣೆಗಾಗಿ ಹೇಳಿಕೊಡು”. ಊರುಬಿಟ್ಟು ಅಮೇರಿಕಾದ ಚಿಕ್ಕಪ್ಪನಮನೆ ತಲುಪಿದ ಬ್ರೂಸ್ಲಿ .
15 ವರ್ಷ ಕಳೆಯುವುದರಲ್ಲಿ ಜಗತ್ತೇ ಬೆರಗಾಗುವಂತೆ ವಿಶ್ವ ವಿಖ್ಯಾತ ಮಾರ್ಷಲ್ ಆರ್ಟ್ ಕಲಾವಿದನಾಗಿ, ಹಾಲಿವುಡ್ ಚಿತ್ರನಟನಾಗಿ ಬೆಳೆದ. ಕುಂಫು-ಕರಾಟೆ ಮೂಲಕ ಜಗತ್ತಿನಲ್ಲಿ ಚೀನೀಯರಿಗೆ ಒಂದು ಘನತೆಯನ್ನು ತಂದುಕೊಟ್ಟ ಬ್ರೂಸ್ಲಿ ಚೀನಾದ ಕಣ್ಮಣಿಯಾದ. ಆತ ನಟಿಸಿದ್ದು ಐದಾರು ಸಿನಿಮಾಗಳಷ್ಟೆ.
ಸಾವಿರಾರು ಕೋಟಿ ಹಣ ಬಂದು ಬೀಳತೊಡಗಿತು. ಈ ಬಡಕಲು ಚೀನಿಹುಡುಗನನ್ನು ನೋಡಿ ಯಾರಕಣ್ಣು ಕಿಸಿರಾಯಿತೋ, ಇದೇ ಹಾಂಗ್ ಕಾಂಗ್ ನಲ್ಲಿ ಸಿನಿಮಾಷೂಟಿಂಗ್ ಒಂದರಲ್ಲಿರುವಾಗಲೇ ದಿಢೀರನೆ ಬ್ರೂಸ್ಲಿ ಸಾವನ್ನಪ್ಪಿದ . ಆಗ ಆತನಿಗಿನ್ನೂ ಕೇವಲ 32 ವರ್ಷ ವಯಸ್ಸು. ಬದುಕಿದ್ದಾಗಲೇ ದಂತಕತೆಯಂತಾಗಿದ್ದ, ಚೀನೀ ಯವಕರಿಗೆ ಸಾಧನೆಯ ಸ್ಪೂರ್ತಿಯಂತಿದ್ದ ಬ್ರೂಸ್ಲಿಯ ಈ ಸಾವಿನ ಸುದ್ದಿಯನ್ನು ಚೀನಾ ಅರಗಿಸಿಕೊಳ್ಳಲು ಹಲವು ವರ್ಷಗಳೇ ಬೇಕಾಯಿತು.
ಬ್ರೂಸ್ಲಿಗಿಂತಾ 15 ವರ್ಷ ಚಿಕ್ಕವನಾದ “ಜಾಕಿ ಚಾನ್” ನ ಕತೆಯೂ ಇದೇ. ಎಷ್ಟೇ ತಿಪ್ಪರಲಾಗ ಹಾಕಿದರೂ ಒಂದನೇ ತರಗತಿಯನ್ನು ಪಾಸುಮಾಡದಾದ ಜಾಕಿಯನ್ನು , ದೈಹಿಕ ಕಸರತ್ತೇ ಪ್ರಧಾನವಾದ “ಚೀನೀ ಡ್ರಾಮಾ ಅಕಾಡಮಿ”ಗೆ ಹಾಕಲಾಯಿತು. ಅಲ್ಲಿ ಖುಷಿಯಿಂದ ಎಲ್ಲವನ್ನೂ ಕಲಿತ ಜಾಕಿ, ಸ್ಟಂಟ್ ಪ್ರೋಗ್ರಾಮುಗಳನ್ನು ನಡೆಸಿ ಹೊಟ್ಟೇಪಾಡು ನಡೆಸತೊಡಗಿದ. ಒಂದು ದಿನದ ಪ್ರೋಗ್ರಾಮಿನಿಂದ ಆದಿನದ ಊಟಮಾತ್ರ ಸಿಗುತ್ತಿತ್ತು.
ಹಾಂಗ್ ಕಾಂಗ್ ನ ಸಿನಿಮಾ ಷೂಟಿಂಗ್ ನಲ್ಲಿ ಕೆಲವುಕಡೆ ಜಾಕಿಗೆ ಸ್ಟಂಟ್ ಮಾಡಲು ಅವಕಾಶಗಳು ಸಿಗತೊಡಗಿದವು. ಬ್ರೂಸ್ಲಿಯ ಎರಡು ಸಿನಿಮಾಗಳಿಗೆ ಜಾಕಿ ಸ್ಟಂಟ್ ಮೆನ್ ಆಗಿ ಕೆಲಸಮಾಡಿದ. ಶೂಟಿಂಗಿನಲ್ಲಿ , ಜಾಕಿಯ ಬೆನ್ನುತಟ್ಟಿದ್ದ ಜಗದ್ವಿಖ್ಯಾತ ತಾರೆ ಬ್ರೂಸ್ಲಿ ” ನಿನಗೆ ಉತ್ತಮ ಭವಿಷ್ಯವಿದೆ ” ಎಂದದ್ದು ಜಾಕಿಯನ್ನು ರೋಮಾಂಚನಗೊಳಿಸಿತ್ತು. ಬ್ರೂಸ್ಲಿಯ ಮಾತು ಹುಸಿಯಾಗಲಿಲ್ಲ.
ಜಾಕಿಚಾನ್ ಕೂಡಾ ಹಾಲಿವುಡ್ಡಿನಲ್ಲಿ ಸ್ವಂತ ಪ್ರತಿಭೆಯಿಂದ ಬ್ರೂಸ್ಲಿಯಷ್ಟೇ ಎತ್ತರಕ್ಕೆ ಬೆಳೆದ. ಕಳೆದ ವರ್ಷ ಜಾಕಿಯ ಆಸ್ತಿಮೊತ್ತ 350 ಮಿಲಿಯನ್ ಡಾಲರ್ ಗಳೆಂದು ಫೋರ್ಬ್ ಘೋಷಿಸಿದೆ. 64 ವರ್ಷ ವಯಸ್ಸಿನ ಜಾಕಿ ಈಗ ಅನೇಕ ಸಮಾಜಸೇವಾ ಕಾರ್ಯಕ್ರಮಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಚೀನೀ ಯುವಜನತೆಯ ಸ್ಪೂರ್ತಿಯಾಗಿದ್ದಾನೆ. ಎಷ್ಟೇ ಮಿಲಿಯನ್ ಮಿಲಿಯನ್ ಶ್ರೀಮಂತಿಕೆ ಬಂದರೂ, ಜಾಕಿಯ ಮನೆಮಾತ್ರ ಹಾಂಗ್ ಕಾಂಗ್ ಎಂಬ ಈ ಪುಟ್ಟ ಊರಿನಲ್ಲಿಯೇ !
ಲೇಖನ- ಚಳ್ಳಕೆರೆ ಯರ್ರಿಸ್ವಾಮಿ