ಅಡುಗೆಗೆ ಬಳಸಿದ ಈರುಳ್ಳಿಯ ಸಿಪ್ಪೆಯನ್ನು ಎಲ್ಲರೂ ಎಸೆಯುತ್ತಾರೆ. ಅದರಿಂದ ಯಾವುದೇ ಉಪಯೋಗ ಇಲ್ಲ ಎಂದು ತಿಪ್ಪೆಗೆ ಸುರಿಯುತ್ತಾರೆ. ಆದರೆ ಕೆಲವು ಜನರಿಗೆ ಮಾತ್ರ ಈರುಳ್ಳಿ ಸಿಪ್ಪೆಯನ್ನು ಕೂಡಾ ಉಪಯೋಗಿಸಬಹುದು ಎಂಬ ಬಗ್ಗೆ ತಿಳಿದಿರುತ್ತದೆ. ಅವುಗಳಿಂದಾಗುವ ಪ್ರಯೋಜನಗಳನ್ನು ತಿಳಿದರೆ ನೀವು ಕೂಡಾ ನಾಳೆಯಿಂದ ಈರುಳ್ಳಿ ಸಿಪ್ಪೆಯನ್ನು ಬಳಸಲು ಆರಂಭಿಸುತ್ತೀರಿ.
ಈರುಳ್ಳಿ ಸಿಪ್ಪೆಗಳನ್ನು ಒಣಗಿಸಿ ಸಂಗ್ರಹಿಸಿಟ್ಟು ಅಡುಗೆಯಲ್ಲಿ ಬಳಸಬಹುದು. ಅವು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಈರುಳ್ಳಿ ಸಿಪ್ಪೆಯು ಅನೇಕ ಪೋಷಕಾಂಶಗಳ ಮೂಲವಾಗಿದೆ. ಇದು ವಿಟಮಿನ್ ಎ ಅನ್ನು ಹೊಂದಿರುತ್ತದೆ. ವಿಟಮಿನ್ ಎ ದೃಷ್ಟಿಯನ್ನು ಸುಧಾರಿಸುತ್ತದೆ. ಅಲ್ಲದೆ ದೇಹಕ್ಕೆ ಅನೇಕ ರೀತಿಯಲ್ಲಿ ಶಕ್ತಿ ನೀಡುತ್ತದೆ. ಇದರಲ್ಲಿ ವಿಟಮಿನ್ ಸಿ ಮತ್ತು ಇ ಕೂಡ ಇದೆ. ಇದು ಚರ್ಮಕ್ಕೆ ತುಂಬಾ ಅವಶ್ಯಕ. ಹಾಗಂತಾ ಒಣ ಸಿಪ್ಪೆಯನ್ನು ತಿನ್ನೋದು ಹೇಗೆ ಎಂದು ನೀವು ಪ್ರಶ್ನಿಸಬಹುದು. ಹೀಗಾಗಿಯೇ ನಾವು ಈರುಳ್ಳಿ ಸಿಪ್ಪೆಯನ್ನು ಅಡುಗೆಯಲ್ಲಿ ಹೇಗೆ ಬಳಸುವುದು ಎಂದು ಇಲ್ಲಿ ಹೇಳುತ್ತೇವೆ ಕೇಳಿ.
ಸೊಪ್ಪಿನ ಸಾರು ಇಷ್ಟ ಪಡುವವರು ಬಹಳ ಮಂದಿ ಇದ್ದಾರೆ. ಇದರೊಂದಿಗೆ ವಿವಿಧ ಮೀನು ಸಾರು ಸೇರಿದಂತೆ ವಿವಿಧ ತೆಳು ಸಾಂಬಾರುಗಳನ್ನು ಕುದಿಸುವಾಗ ಅದರ ಗ್ರೇವಿ ದಪ್ಪಗಾಗಲು ಮತ್ತು ಪರಿಮಳಕ್ಕೆ ಈರುಳ್ಳಿ ಸಿಪ್ಪೆಯ ಪುಡಿಯನ್ನು ಸೇರಿಸಬಹುದು. ಇದು ನಿಮ್ಮ ಸಾಂಬಾರಿಗೆ ಉತ್ತಮ ಬಣ್ಣವನ್ನು ಕೂಡಾ ನೀಡುತ್ತದೆ. ಪುಡಿ ಹಾಕಲು ಇಷ್ಟಪಡದವರು ನೇರವಾಗಿ ಸಿಪ್ಪೆಯನ್ನು ಕೂಡಾ ಹಾಕಬಹುದು. ಎರಡು ನಿಮಿಷ ಬೇಯಿಸಿದ ನಂತರ, ಅವುಗಳನ್ನು ಹೊರತೆಗೆಯಬೇಕು.
ಈರುಳ್ಳಿ ಸಿಪ್ಪೆಯ ಚಹಾ
ನೀವು ಈರುಳ್ಳಿ ಸಿಪ್ಪೆಯನ್ನು ಹಾಕಿ ಚಹಾ ಕೂಡಾ ಮಾಡಬಹುದು. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಟೀ ಕುಡಿಯುವುದರಿಂದ ಮನಸ್ಸು ಪ್ರಶಾಂತವಾಗುತ್ತದೆ. ರೋಗನಿರೋಧಕ ಶಕ್ತಿ ಸುಧಾರಿಸುತ್ತದೆ. ಒಂದು ಕಪ್ ಬಿಸಿ ನೀರು ಹಾಕಿ, ಈರುಳ್ಳಿ ಸಿಪ್ಪೆ ಅಥವಾ ಈರುಳ್ಳಿ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಬೇಕು. ಸ್ವಲ್ಪ ಸಮಯದವರೆಗೆ ಹೆಚ್ಚಿನ ಉರಿಯಲ್ಲಿ ಕುದಿಸಿದ ಬಳಿಕ, ಸಿಪ್ಪೆಯನ್ನು ತೆಗೆದುಹಾಕಿ. ಚಹಾ ಪುಡಿ ಸೇರಿಸಿದ ಬಳಿಕ ಚಹಾವನ್ನು ಕುಡಿಯಿರಿ.
ನೀರಿನಲ್ಲಿ ಮಿಶ್ರಣ ಮಾಡಿ
ಈರುಳ್ಳಿ ಸಿಪ್ಪೆ ಅಥವಾ ಅದರ ಪುಡಿಯನ್ನು ನೀರಿನಲ್ಲಿ ಬೆರೆಸಿ ಸ್ವಲ್ಪ ಹೊತ್ತು ನೆನೆಸಿದ ಬಳಿಕ ಕುಡಿಯಿರಿ. ಹೀಗೆ ಮಾಡುವುದರಿಂದ ಸ್ನಾಯು ಸೆಳೆತ ಕಡಿಮೆಯಾಗುತ್ತದೆ. ಸ್ನಾಯುಗಳು ಹೊಂದಿಕೊಳ್ಳುತ್ತವೆ. ಈರುಳ್ಳಿ ಸಿಪ್ಪೆಯನ್ನು ಒಂದು ಲೋಟ ನೀರಿನಲ್ಲಿ ಕಾಲು ಗಂಟೆ ನೆನೆಸಿಟ್ಟರೆ ಸಾಕು. ಬಳಿಕ ಸಿಪ್ಪೆ ತೆಗೆದು ಕುಡಿಯಿರಿ. ಇದು ಒಂದು ರೀತಿಯ ಔಷಧ.
ಅನ್ನದ ಜತೆಗೆ
ಅಕ್ಕಿ ಬೇಯಿಸುವಾಗ ಈರುಳ್ಳಿ ಸಿಪ್ಪೆ ಅಥವಾ ಈರುಳ್ಳಿ ಪುಡಿಯನ್ನು ಸೇರಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ.
ಚಪಾತಿಗೂ ಸೇರಿಸಬಹುದು
ಮನೆಯಲ್ಲಿ ಚಪಾತಿ ಹಿಟ್ಟನ್ನು ಕಲಸುವಾಗ ಸ್ವಲ್ಪ ಈರುಳ್ಳಿ ಪುಡಿ ಹಾಕಿದರೆ ಹೊಸ ರುಚಿ ಬರುತ್ತದೆ. ಆ ಚಪಾತಿಯನ್ನು ಸಾಂಬಾರಿನ ಜೊತೆ ತಿನ್ನುವುದೂ ರುಚಿ.
ಮೊಟ್ಟೆ ಬೇಯಿಸುವಾಗ
ಮೊಟ್ಟೆ ಬೇಯಿಸುವಾಗ ಅದರ ನೀರಿಗೆ ಈರುಳ್ಳಿ ಸಿಪ್ಪೆಯನ್ನು ಹಾಕಿದರೆ, ಮೊಟ್ಟೆಯ ಸಿಪ್ಪೆ ಬೇಗ ಬಿಡಿಸಬಹುದು.