ಉಡುಪಿ : ಎನ್ಕೌಂಟರ್ನಲ್ಲಿ ಮೃತಪಟ್ಟಿದ್ದ ನಕ್ಸಲ್ ನಾಯಕ ವಿಕ್ರಂ ಗೌಡನ ಮೃತದೇಹವನ್ನು ಅಂತ್ಯಸಂಸ್ಕಾರಕ್ಕಾಗಿ ತೆಗೆದುಕೊಂಡು ಹೋಗುತ್ತಿದ್ದ ಅಂಬುಲೆನ್ಸ್ ಪಲ್ಟಿಯಾದ ಘಟನೆ ಹೆಬ್ರಿಯ ಕೂಡ್ಲು ಸಮೀಪ ನಡೆದಿದೆ.
ಬೆಳಗ್ಗೆ ಮಣಿಪಾಲದ ಕೆಎಂಸಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅಂತ್ಯಸಂಸ್ಕಾರಕ್ಕಾಗಿ ಮಣಿಪಾಲದಿಂದ ಕೂಡ್ಲುವಿಗೆ ಮೃತದೇಹವನ್ನು ಅಂಬುಲೆನ್ಸ್ ಮೂಲಕ ಸಾಗಿಸಲಾಗುತ್ತಿತ್ತು.
ವೇಗವಾಗಿ ಸಾಗುತ್ತಿದ್ದಾಗ ದಿಢೀರ್ ದನ ರಸ್ತೆಗೆ ಅಡ್ಡ ಬಂದಿದೆ. ದನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ಬದಿಗೆ ಅಂಬುಲೆನ್ಸ್ ಚಲಾಯಿಸಿದಾಗ ಪಲ್ಟಿಯಾಗಿದೆ. ಆದರೆ ಈ ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ. ಬಳಿಕ ಸ್ಥಳೀಯರ ನೆರವಿನಿಂದ ಅಂಬುಲೆನ್ಸ್ ಅನ್ನು ರಸ್ತೆಗೆ ತಂದು ಮೃತದೇಹವನ್ನು ಕೊಂಡೊಯ್ಯಲಾಗಿದೆ.
ಮಧ್ಯಾಹ್ನ ವಿಕ್ರಂ ಗೌಡನ ಸ್ವಗ್ರಾಮ ಕೂಡ್ಲುಗೆ ಮೃತದೇಹ ತಲುಪಿದೆ. ಕುಟುಂಬಸ್ಥರು ಅಂತಿಮ ವಿಧಿ ವಿಧಾನ ನಡೆಸಿದ ಬಳಿಕ ಚಿತೆಗೆ ಅಗ್ನಿ ಸ್ಪರ್ಶ ನಡೆಯಲಿದೆ.