ಕಲಬುರಗಿ : ಎಫ್ ಡಿಎ ಪರೀಕ್ಷೆ ಬರೆಯಲು ಬಂದ ಮಹಿಳೆಯರಿಬ್ಬರು ಕತ್ತಿನಲ್ಲಿದ್ದ ತಾಳಿಗೆ ಬ್ಲೂಟೂತ್ ಸಿಕ್ಕಿಸಿಕೊಂಡು ಪರೀಕ್ಷೆ ಬರೆಯಲು ಯತ್ನಿಸಿದ ಘಟನೆ ನಗರದ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನಲ್ಲಿ ನಡೆದಿದೆ.
ಪರೀಕ್ಷೆ ಬರೆಯಲು ಯತ್ನಿಸಿದ ಮಹಿಳೆಯರಿಬ್ಬರು ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.ನಿನ್ನೆಯಿಂದ ಗ್ರೂಪ್ ಸಿ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆ ನಡೆಯುತ್ತಿದೆ ಈ ವೇಳೆ ಪರೀಕ್ಷೆ ಬರೆಯುವ ಪ್ರತಿಯೊಂದು ಅಭ್ಯರ್ಥಿಯನ್ನು ಹೆಚ್ ಹೆಚ್ ಎಮ್ ಡಿ ಯಂತ್ರದ ಮೂಲಕ ತೀವ್ರ ತಪಾಸಣೆ ನಡೆಸಲಾಗುತ್ತಿದೆ.
ಈ ಸಂದರ್ಭ ತಾಳಿಗೆ ಬ್ಲೂಟೂತ್ ಸಿಕ್ಕಿಸಿಕೊಂಡು ಪರೀಕ್ಷೆ ಬರೆಯಲು ಬಂದ ರಾಯಚೂರು ಮೂಲದ ಮಹಿಳೆಯರಿಬ್ಬರು ಸಿಕ್ಕಿ ಹಾಕಿಕೊಂಡಿದ್ದಾರೆ.
ಪರೀಕ್ಷಾ ತಪಾಸಣಾ ಸಿಬ್ಬಂದಿಗಳು ಈ ಇಬ್ಬರು ಮಹಿಳೆಯರಿಗೆ ಕಾಲುಂಗುರ, ತಾಳಿ, ಕಿವಿ ಓಲೆ, ವಾಚ್ ಸೇರಿದಂತೆ ಮೈಮೇಲಿರುವ ವಸ್ತುಗಳನ್ನು ತೆಗೆದುಕೊಂಡು ಪರಿಶೀಲನೆ ನಡೆಸಿದ್ದಾರೆ.
ಆದರೆ ಇವರು ಕತ್ತಿನಲ್ಲಿದ್ದ ತಾಳಿಯನ್ನು ಮಾತ್ರ ಪರಿಶೀಲನೆಗೆಂದು ತೆಗೆದು ಕೊಡಲು ಹಿಂದೇಟು ಹಾಕಿದ್ದು, ಬಳಿಕ ಸಿಬ್ಬಂದಿಗಳು ಮಹಿಳೆಯರಿಗೆ ಪರೀಕ್ಷೆಗೆ ಹಾಜರಾಗದಂತೆ ತಡೆದಿದ್ದಾರೆ. ಬಳಿಕ ಸಾಕಷ್ಟು ವಾದ ಮಾಡಿದ ಮಹಿಳೆಯರು ಕತ್ತಿನಲ್ಲಿದ್ದ ತಾಳಿಯನ್ನು ತೆಗೆದು ಕೊಟ್ಟಿದ್ದಾರೆ. ಈ ವೇಳೆ ತಾಳಿಯಲ್ಲಿ ಬ್ಲೂಟೂತ್ ಇರುವುದು ಪತ್ತೆಯಾಗಿದೆ.