ಬೆಂಗಳೂರು :ಹರಿಯಾಣ ರಾಜ್ಯದಲ್ಲಿ ಬಿಜೆಪಿ ಸತತವಾಗಿ 3ನೇ ಬಾರಿಗೆ ಅಧಿಕಾರ ಪಡೆಯುವತ್ತ ದಾಪುಗಾಲು ಹಾಕುತ್ತಿರುವುದು ಸಂತಸದ ವಿಚಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಹರಿಯಾಣದಲ್ಲಿ ಬಿಜೆಪಿ ದೂಳೀಪಟ ಆಗುವುದಾಗಿ ವಿಪಕ್ಷಗಳು ಬೊಬ್ಬೆ ಹೊಡೆಯುತ್ತಿದ್ದವು. ಕಾಂಗ್ರೆಸ್ ಪಕ್ಷ ಅಧಿಕಾರ ಗಳಿಸುವ ಭ್ರಮೆಯಲ್ಲಿತ್ತು. ಎಲ್ಲ ಪಿತೂರಿಗಳ ನಡುವೆ ಅದಕ್ಕೆ ತದ್ವಿರುದ್ಧವಾಗಿ ಬಿಜೆಪಿ ಮತ್ತೆ ಜಯಭೇರಿ ನಿಟ್ಟಿನಲ್ಲಿ ಸಾಗುತ್ತಿರುವುದು ಸಂತಸದ ಸಂಗತಿ ಎಂದು ತಿಳಿಸಿದರು.
ಜಮ್ಮು- ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿ, ಕಾನೂನು ಸುವ್ಯವಸ್ಥೆ ಹತೋಟಿಗೆ ಬಂದ ಬಳಿಕ ಚುನಾವಣೆ ನಡೆದಿದೆ. ಅಭಿವೃದ್ಧಿ ಕೆಲಸಗಳೂ ಆಗುತ್ತಿದ್ದು, ಬಿಜೆಪಿ ಉತ್ತಮವಾಗಿ ಪ್ರದರ್ಶನ ನೀಡುತ್ತಿದೆ ಎಂದರು.
ಗೌರವಾನ್ವಿತ ಈಶ್ವರಪ್ಪನವರು ಹಿರಿಯರಿದ್ದಾರೆ. ನಿನ್ನೆಯ ಅವರ ಪತ್ರಿಕಾ ಹೇಳಿಕೆಯನ್ನು ಗಮನಿಸಿದ್ದೇನೆ. ಸತ್ಸಂಪ್ರದಾಯ, ಸಂಸ್ಕಂತಿ ಬೆಳೆಸಬೇಕು, ಉಪನ್ಯಾಸ, ಭ್ರಷ್ಟಾಚಾರದ ಕುರಿತು ಅನೇಕ ಒಳ್ಳೆಯ ವಿಚಾರಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ. ನಾನು ಕಿರಿಯ ವಯಸ್ಸಿನವನು. ಈಶ್ವರಪ್ಪನವರಿಗೆ ಒಳ್ಳೆಯದಾಗಲಿ; ಅವರು ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಈ ಕುರಿತ ಪ್ರಶ್ನೆಗೆ ಉತ್ತರ ನೀಡಿದರು.
ಕಾಂಗ್ರೆಸ್ ಮುಖಂಡರ ವಿರೋಧದ ನಡುವೆ ಜಾತಿಗಣತಿ ಮಂಡನೆ
ರಾಜ್ಯ ಸರಕಾರಕ್ಕೆ ಜಾತಿ ಗಣತಿ ಮಾಡಲು ಅವಕಾಶ ಇದೆಯೇ? ಎಂಬುದು ಮೊದಲ ಯಕ್ಷ ಪ್ರಶ್ನೆ. 5 ವರ್ಷಗಳ ಕಾಲ ತಾವು ಮುಖ್ಯಮಂತ್ರಿ ಆಗಿ ಇದ್ದಿರಿ. ನಿಮ್ಮ ಅವಧಿಯಲ್ಲಿ 165 ಕೋಟಿ ಖರ್ಚು ಮಾಡಿ ಈ ವರದಿ ತಯಾರಿಸಲಾಗಿದೆ. ಅದರಲ್ಲಿ ಲೋಪದೋಷದ ಕುರಿತು ನಿಮ್ಮ ಪಕ್ಷದ ಹಿರಿಯರೇ ಮಾತನಾಡುತ್ತಿದ್ದಾರೆ. ಸಿಎಂ ಸ್ಥಾನ ಕಳಕೊಳ್ಳುವ ಆತಂಕವೇ? ಯಾಕೆ ಆತುರಾತುರವಾಗಿ ಇದನ್ನು ಅನುಷ್ಠಾನಕ್ಕೆ ತರಲು ಪ್ರಯತ್ನ ಮಾಡುತ್ತಿದ್ದೀರಿ? ಎಂದು ಕೇಳಿದರು.
ಮುಖ್ಯಮಂತ್ರಿ ಸ್ಥಾನದಲ್ಲಿ ಬಹಳ ದಿನ ಉಳಿಯಲು ಸಾಧ್ಯವಿಲ್ಲ ಎಂಬುದು ಸಿದ್ದರಾಮಯ್ಯನವರಿಗೆ ಮನವರಿಕೆ ಆಗಿದೆ. ತಾನು ಅಪರಾಧಿ ಸ್ಥಾನದಲ್ಲಿದ್ದು, ಬಹಳ ದಿನ ಈ ಭಂಡತನ ನಡೆಯದು ಎಂದು ಅವರಿಗೆ ಗೊತ್ತಾಗಿದೆ. ಹಾಗಾಗಿ ಬ್ರಹ್ಮಾಸ್ತ್ರ ಚಲಾವಣೆ ಮಾಡುವ ಪ್ರಯತ್ನದಲ್ಲಿದ್ದಂತೆ ಕಾಣುತ್ತಿದೆ ಎಂದು ತಿಳಿಸಿದರು.
ಸಿದ್ದರಾಮಯ್ಯನವರು ಜಾತಿ ಗಣತಿಯನ್ನು ತರಾತುರಿಯಲ್ಲಿ ಕ್ಯಾಬಿನೆಟ್ನಲ್ಲಿ ಮಂಡಿಸಲು ಮುಂದಾಗಿದ್ದಾರೆ. ಕಾಂಗ್ರೆಸ್ ಮುಖಂಡರೂ ಇದನ್ನು ವಿರೋಧಿಸುತ್ತಿದ್ದಾರೆ. ಅದಕ್ಕೆ ಕಾರಣಗಳೂ ಸ್ಪಷ್ಟವಾಗಿವೆ. ಮತ್ತೊಮ್ಮೆ ಪರಿಶೀಲಿಸಿ ಎಂದು ಶಾಮನೂರು ಶಿವಶಂಕರಪ್ಪ ಅವರೂ ಹೇಳಿದ್ದಾರೆ. ಒಕ್ಕಲಿಗ ಸಮುದಾಯಕ್ಕೆ ಅನ್ಯಾಯ ಆಗಲಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ ಎಂದು ಗಮನ ಸೆಳೆದರು.
ಆ ಸಮುದಾಯಗಳಿಗೆ ನ್ಯಾಯ ಸಿಗಬೇಕೆಂಬ ಬದ್ಧತೆ ಬಿಜೆಪಿಗೆ ಇದೆ; ಅದರ ಬಗ್ಗೆ ಗೊಂದಲ ಬೇಡ; ಆದರೆ, ಇದನ್ನು ರಾಜಕೀಯ ದಾಳವಾಗಿ ಬಳಸಿ ತಮ್ಮ ಕುರ್ಚಿ ಉಳಿಸಿಕೊಳ್ಳಲು ಹೊರಟಿದ್ದಾರೆ. ಇದು ಖಂಡಿತ ಸಾಧ್ಯವಾಗುವುದಿಲ್ಲ. ಇದರ ಹಿಂದೆ ರಾಜಕೀಯ ಷಡ್ಯಂತ್ರ, ಕುತಂತ್ರ ಇರುವುದಾಗಿ ಕಾಂಗ್ರೆಸ್ಸಿನವರೇ ಹೇಳುತ್ತಿದ್ದಾರೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.