ನವದೆಹಲಿ: ಐಸಿಸ್ ಉಗ್ರರ ಜೊತೆಗಿನ ನಂಟಿಗೆ ಸಂಬಂಧಪಟ್ಟಂತೆ ರಾಷ್ಟ್ರೀಯ ತನಿಖಾ ದಳ ರಾಜ್ಯದ 19 ಕಡೆ ದಾಳಿ ನಡೆಸಿದೆ.
ಬೆಂಗಳೂರು ಸೇರಿದಂತೆ 4 ರಾಜ್ಯಗಳಾದ್ಯಂತ ಸುಮಾರು 20 ಸ್ಥಳಗಳಲ್ಲಿ ದಾಳಿ ನಡೆಸಿದೆ. ಕರ್ನಾಟಕದ 11 ಸ್ಥಳಗಳು, ಜಾರ್ಖಂಡ್ನ 4, ಮಹಾರಾಷ್ಟ್ರದ 3 ಮತ್ತು ದೆಹಲಿಯ 1 ಸ್ಥಳಗಳಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ಬೆಂಗಳೂರಿನ ಆರ್.ಸಿ ನಗರ, ಹೆಬ್ಬಾಳ, ಪುಲಿಕೇಶಿ ನಗರ, ಶಿವಾಜಿ ನಗರ, ಜೆ.ಸಿ. ನಗರದ ಚಿನ್ನಪ್ಪ ಗಾರ್ಡನ್ ಸೇರಿದಂತೆ ಹಲವು ಕಡೆ ದಾಳಿ ನಡೆಸಿ ತಪಾಸಣೆ ನಡೆಸುತ್ತಿದ್ದಾರೆ. ಬಳ್ಳಾರಿಯಲ್ಲಿಯೂ ಒಟ್ಟು 9 ತಂಡಗಳು ಕಾರ್ಯಾಚರಣೆ ನಡೆಸಿವೆ.ಇನ್ನು ಬಳ್ಳಾರಿಯಲ್ಲಿ ಮುಂಜಾನೆಯೇ ಎನ್ಐಎ ಕಾರ್ಯಾಚರಣೆ ನಡೆಸಿದೆ. ನಿಷೇಧಿತ ಪಿಎಫ್ಐನ 7 ಮಂದಿಯ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಬಳ್ಳಾರಿಯ ಶಮೀವುಲ್ಲಾ, ಅಜಾಜ್ ಅಹಮದ್, ಸುಲೇಮಾನ್, ತಬ್ರೇಜ್, ನಿಖಿಲ್ ಅಲಿಯಾಸ್ ಸೂಫಿಯಾನ್, ಮುಜಾಮಿಲ್ ಎಂಬವರನ್ನ ಬಂಧಿಸಲಾಗಿದೆ.
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಬಾಡಿಗೆ ಮನೆ ಪಡೆದು ವಾಸವಿದ್ದ ಬಳ್ಳಾರಿಯ ಶಮಿವುಲ್ಲಾನ ಬಳಿ ಸ್ಫೋಟಕ ತಯಾರಿಕೆಗೆ ಬಳಸುವ 7 ಕೆಜಿ ಸೋಡಿಯಂ ನೈಟ್ರೇಟ್ ಅನ್ನೂ ವಶಪಡಿಸಿಕೊಳ್ಳಲಾಗಿದೆ.ಅಫ್ಘಾನಿಸ್ತಾನಕ್ಕೆ ಹೋಗಿ ಕಾನೂನುಬಾಹಿರ ಚಟುವಟಿಕೆ ನಡೆಸಲು ಯತ್ನಿಸಿದ್ದಾರೆ ಎಂಬ ಅನುಮಾನದ ಮೇರೆಗೆ ಪಿಎಫ್ಐ ಮಾಜಿ ಪ್ರಧಾನ ಕಾರ್ಯದರ್ಶಿ ಸುಲೇಮಾನ್ ಮನೆಯಲ್ಲೂ ಅಧಿಕಾರಿಗಳು ಶೋಧ ಕಾರ್ಯ ನಡೆಸಲಾಯಿತು.
ಇತ್ತೀಚೆಗೆ ದೇಶದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸುತ್ತಿದ್ದ ಹಾಗೂ ಯುವಕರನ್ನು ಐಸಿಸ್ ಭಯೋತ್ಪಾದನಾ ಸಂಘಟನೆ ಸೇರಿಸುತ್ತಿದ್ದ ಮಾಹಿತಿ ಮೇರೆಗೆ ಎನ್ಐಎ ಅಧಿಕಾರಿಗಳು ದೇಶದ 40 ಕಡೆ ದಾಳಿ ನಡೆಸಿದ್ದರು.ಬೆಂಗಳೂರಿನಲ್ಲಿಯೂ ದಾಳಿ ನಡೆಸಿ 15 ಮಂದಿಯನ್ನ ಬಂಧಿಸಲಾಗಿತ್ತು. ಈ ಪೈಕಿ ಓರ್ವ ಐಸಿಸ್ ಮಾಡ್ಯೂಲ್ನ ನಾಯಕನಾಗಿದ್ದ. ದಾಳಿಯ ಸಮಯದಲ್ಲಿ, ಅಪಾರ ಪ್ರಮಾಣದ ನಗದು, ಶಸ್ತ್ರಾಸ್ತ್ರಗಳು, ಸೂಕ್ಷ್ಮ ದಾಖಲೆಗಳು ಮತ್ತು ವಿವಿಧ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.


































