ಚಿತ್ರದುರ್ಗ: ರಾಜ್ಯದಲ್ಲಿ ಕನ್ನಡಿಗರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಉತ್ತಮ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ ಜಾರಿಗೊಳಿಸಿದೆ ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ಜಿಲ್ಲಾಡಳಿತ ವತಿಯಿಂದ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶುಕ್ರವಾರ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಷ್ಟçಧ್ವಜಾರೋಹಣ ನೆರವೇರಿಸಿ, ರಾಜ್ಯೋತ್ಸವ ಸಂದೇಶ ನೀಡಿದರು.
ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮದಡಿ ರಾಜ್ಯದಲ್ಲಿ ದೇಶಿಯ ಹಾಗೂ ವಿದೇಶಿಯ ಕಂಪನಿಗಳಲ್ಲಿ ಉದ್ದಿಮೆ ಸ್ಥಾಪಿಸಬೇಕಾದರೆ, ಕನ್ನಡಿಗರಿಗೆ ಕಡ್ಡಾಯ ಉದ್ಯೋಗದ ಅವಕಾಶಗಳನ್ನು ಕಲ್ಪಿಸಬೇಕು. ಅಂತಹ ಕಂಪನಿಗಳಿಗೆ ಮಾತ್ರ ಸರ್ಕಾರದಿಂದ ಉದ್ದಿಮೆ ಸ್ಥಾಪನೆಗೆ ಅನುಮತಿ ನೀಡಲಾಗುವುದು. ಕನ್ನಡ ಭಾಷೆಯ ಉಳಿವಿಗಾಗಿ ಬೆಳವಣಿಗೆಗಾಗಿ ನಮ್ಮ ಸರ್ಕಾರ ನಾನಾ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಕಾವಲು ಸಮಿತಿ ನೇಮಿಸಿ ಆಡಳಿತ ಭಾಷೆಯಾಗಿ ಕನ್ನಡ ಕಡ್ಡಾಯ ಮಾಡಿದೆ. ಹಾಗೆಯೇ “ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ” ಅಭಿಯಾನದಡಿ ಎಲ್ಲಾ ಸರ್ಕಾರಿ ನೌಕರರಿಗೆ ಕೆಂಪು-ಹಳದಿ ಬಣ್ಣದ ಗುರುತಿನ ಚೀಟಿಯ ಟ್ಯಾಗ್ ಧರಿಸುವಂತೆ ಸೂಚಿಸುವುದರ ಮೂಲಕ ಕನ್ನಡಕ್ಕೆ ಹೆಮ್ಮೆ ತಂದಿದೆ ಎಂದು ಹೇಳಿದರು.
ಕನ್ನಡ ಭಾಷೆ ಬಾರದಿರುವ ಉದ್ಯೋಗಿಗಳಿಗೆ ಕನ್ನಡ ಕಲಿಸಲು “ಕನ್ನಡ ಕಲಿಕಾ ಘಟಕ” ವನ್ನು ಸ್ಥಾಪಿಸಿ ಸರ್ಕಾರವು ಅಗತ್ಯ ಬೋಧಕ ಸಿಬ್ಬಂದಿ ಮತ್ತು ಕಲಿಕಾ ಸಾಮಗ್ರಿಯನ್ನು ಒದಗಿಸಲು ಹಾಗೆಯೇ ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ ಭಾಷೆಯ ಬಳಕೆಗಾಗಿ ಅನೇಕ ಕ್ರಮಗಳನ್ನು ಕೈಗೊಂಡಿದೆ. ಹಾಗಾಗಿ ಅಲ್ಲಿಯೂ ಕನ್ನಡ ಬಳಕೆಯಾಗುತ್ತಿದೆ ಎಂದು ಹೇಳಿದರು.
ನಮ್ಮ ಸರ್ಕಾರ ಹಿಂದಿನ ರಾಜಮಹಾರಾಜರಂತೆ ಕನ್ನಡವನ್ನು ಉಳಿಸಿ ಬೆಳೆಸಿ ಮುಂದಿನ ತಲೆಮಾರುಗಳಿಗೆ ನಮ್ಮ ಪರಂಪರೆ, ಸಂಸ್ಕೃತಿ, ಇತಿಹಾಸ ತಲುಪಿಸುವ ಕೆಲಸ ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಕನ್ನಡ ಬೆಳೆಸಲು ಸರ್ಕಾರಕ್ಕೆ ಮಾತ್ರ ಬಿಡದೆ ಜನರೂ ಕೈ ಜೋಡಿಸಬೇಕು ಎಂದರು.