ಬೆಂಗಳೂರು : ಇಂಟರ್ನಿಯಾಗಿ ಬಂದ ಕಾನೂನು ವಿಧ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮಂಗಳೂರಿನ ಖ್ಯಾತ ವಕೀಲ ಕೆಎಸ್ಎನ್ ರಾಜೇಶ್ ವಿರುದ್ದ ದಾಖಲಾಗಿರುವ ಪ್ರಕರಣ ಮತ್ತು ಅದರ ವಿಚಾರಣೆ ರದ್ದು ಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಮಂಗಳೂರು ಮಹಿಳಾ ಠಾಣೆಯ ಪೊಲೀಸರು ದಾಖಲಿಸಿದ ಎಫ್ಐಆರ್ ಮತ್ತು 3ನೇ ಹೆಚ್ಚವರಿ ಜೆಎಂಎಫ್ಸಿ ನ್ಯಾಯಾಲಯದ ವಿಚಾರಣೆ ರದ್ದುಪಡಿಸಲು ಕೋರಿ ವಕೀಲ ಕೆ ಎಸ್ ಎನ್ ರಾಜೇಶ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.“ಪ್ರಶಿಕ್ಷಣಾರ್ಥಿಯಾಗಿ ವಕೀಲರ ಕಚೇರಿಗೆ ಸೇರಿದ ನಿಷ್ಕಪಟ ಕಾನೂನು ವಿದ್ಯಾರ್ಥಿನಿ ಮೇಲೆ ಈ ರೀತಿಯ ಭಯಾನಕ ಕೃತ್ಯ ನಡೆಸಿದರೆ, ಅದು ಆಕೆಯ ವೃತ್ತಿ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹೀಗಾಗಿ, ವಿಚಾರಣಾಧೀನ ನ್ಯಾಯಾಲಯದ ಸಂಪೂರ್ಣ ವಿಚಾರಣೆ ಎದುರಿಸಿ, ಆರೋಪಿಯು ದೋಷಮುಕ್ತರಾಗಿ ಬರಬೇಕು” ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.