ಕೆನಡಾ: ಹಿಂದೂ ದೇಗುಲವನ್ನು ಕಿಡಿಗೇಡಿಗಳು ವಿರೂಪಗೊಳಿಸಿರುವ ಘಟನೆ ಕೆನಡಾದಲ್ಲಿ ನಡೆದಿದೆ.
ದೇಗುಲದ ಗೋಡೆ ಮೇಲೆ ಗ್ರಾಫಿಟಿ ಫೈಂಟಿಂಗ್ನಿಂದ ಪ್ರಧಾನಿ ಮೋದಿ ಮತ್ತು ಭಾರತೀಯ ಮೂಲದ ಕೆನಡಾ ಸಂಸದ ಚಂದ್ರ ಆರ್ಯಗೆ ಬೆದರಿಕೆಯೊಡ್ಡಿ ಬರೆದಿರುವ ಬರಹಗಳು ಕಂಡುಬಂದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಚಂದ್ರ ಆರ್ಯ ಅವರು ಪೋಸ್ಟ್ ಮಾಡಿದ್ದು, ಎಡ್ಮಂಟನ್ನಲ್ಲಿರುವ ಹಿಂದೂ ದೇವಾಲಯ ಬಿಎಪಿಎಸ್ ಸ್ವಾಮಿನಾರಾಯಣ ಮಂದಿರವನ್ನು ಮತ್ತೆ ಧ್ವಂಸಗೊಳಿಸಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ, ಗ್ರೇಟರ್ ಟೊರೊಂಟೊ ಪ್ರದೇಶ, ಬ್ರಿಟಿಷ್ ಕೊಲಂಬಿಯಾ ಮತ್ತು ಕೆನಡಾದ ಇತರ ಸ್ಥಳಗಳಲ್ಲಿ ಹಿಂದೂ ದೇವಾಲಯಗಳನ್ನು ದ್ವೇಷಪೂರಿತ ಗೀಚುಬರಹದಿಂದ ಧ್ವಂಸಗೊಳಿಸಲಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.
ಸಿಖ್ಖರ ನ್ಯಾಯಕ್ಕಾಗಿ ಗುರುಪತ್ವಂತ್ ಸಿಂಗ್ ಪನ್ನುನ್ ಕಳೆದ ವರ್ಷ ಹಿಂದೂಗಳು ಭಾರತಕ್ಕೆ ಹಿಂತಿರುಗುವಂತೆ ಸಾರ್ವಜನಿಕವಾಗಿ ಕರೆ ನೀಡಿದ ಅವರು, ಖಲಿಸ್ತಾನ್ ಬೆಂಬಲಿಗರು ಬ್ರಾಂಪ್ಟನ್ ಮತ್ತು ವ್ಯಾಂಕೋವರ್ನಲ್ಲಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯನ್ನು ಸಾರ್ವಜನಿಕವಾಗಿ ಆಚರಿಸಿದರು ಮತ್ತು ಮಾರಣಾಂತಿಕ ಶಸ್ತ್ರಾಸ್ತ್ರಗಳ ಚಿತ್ರಗಳನ್ನು ಝಳಪಿಸಿದ್ದರು ಎಂದು ಹೇಳಿದ್ದಾರೆ.