ಬೆಂಗಳೂರು : ಕೆಪಿಸಿಸಿ ವಕ್ತಾರ ಎಮ್. ಲಕ್ಷ್ಮಣ ಅವರು ಸಂಸದ ಪ್ರತಾಪ್ ಸಿಂಹ ವಿರುದ್ಧ ಆಧಾರ ರಹಿತ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಮಾನನಷ್ಟ ಮೊಕದಮ್ಮೆ ಹಾಕಲು ಬೆಂಗಳೂರಿನ 32ನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ
ಸಂಸದ ಪ್ರತಾಪ್ ಸಿಂಹ ಅವರು ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ನಿರ್ಮಾಣ ಸಮಯದಲ್ಲಿ 60 ಕೋಟಿ ರೂ. ಹಣವನ್ನು ಅಕ್ರಮವಾಗಿ ಸಂಪಾದನೆ ಮಾಡಿ, ಕೊಡಗಿನ ಬೇನಾಮಿ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆ. ಈ ಕುರಿತು ಐಟಿ, ಇಡಿಗೆ ದೂರು ಸಲ್ಲಿಸುತ್ತೇನೆ ಎಂದು ಲಕ್ಷ್ಮಣ್ ಅವರು 2023 ರ ಜೂನ್ 16 ಹಾಗೂ 20ರಂದು ಪತ್ರಿಕಾಗೋಷ್ಠಿ ನಡೆಸಿ ಆರೋಪ ಮಾಡಿದ್ದಾರೆ.
2023ರ ಡಿಸೆಂಬರ್ 13ರಂದು ಸಂಸತ್ ಲೋಕಸಭೆಯಲ್ಲಿ ಮೈಸೂರಿನ ಮನೋರಂಜನ್ ಮತ್ತು ಆತನ ಸ್ನೇಹಿತ ಸಾಗರ್ ಶಾ ಅವರು ಹೊಗೆ ಬಾಂಬ್ ಸ್ಫೋಟಿಸಿದ್ದು, ಆ ಕೃತ್ಯ ಎಸಗಲು ಅವರಿಗೆ ಪ್ರತಾಪ್ ಸಿಂಹ ತರಬೇತಿ ನೀಡಿರುವ ಬಗ್ಗೆ 5 ನಿಮಿಷದ ವಿಡಿಯೋ ತಮ್ಮ ಬಳಿ ಇದೆ. ಅದನ್ನು ಮಾಧ್ಯಮದವರು ಹಾಗೂ ಪೊಲೀಸರಿಗೆ ನೀಡುತ್ತೇನೆಂದು ಲಕ್ಷ್ಮಣ್ ಆರೋಪ ಮಾಡಿದ್ದರು ಎಂದು ದೂರಿನಲ್ಲಿ ಪ್ರತಾಪ್ ಸಿಂಹ ತಿಳಿಸಿದ್ದರು.
ಸಂಸದ ಪ್ರತಾಪ್ ಸಿಂಹ ದಾಖಲಿಸಿರುವ ಖಾಸಗಿ ದೂರನ್ನು ನ್ಯಾಯಾಲಯವು ವಿಚಾರಣೆ ನಡೆಸಿತು. ಪ್ರತಾಪ್ ಸಿಂಹ ಅವರಿಗೆ ಮಾನನಷ್ಟ ಉಂಟು ಮಾಡಿದ ಆರೋಪ ಸಂಬಂಧ ಲಕ್ಷ್ಮಣ್ ವಿರುದ್ಧ ಸೂಕ್ತ ಪುರಾವೆಗಳು ಇರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹಾಗಾಗಿ, ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಮುಂದಿನ ಕಾನೂನು ಪ್ರಕ್ರಿಯೆ ಆರಂಭಿಸುವುದು ಸೂಕ್ತವೆನಿಸುತ್ತಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ಅಭಿಪ್ರಾಯಟ್ಟಿದೆ.
ಅಲ್ಲದೆ, ಐಪಿಸಿ ಸೆಕ್ಷನ್ 499, 500 ಮತ್ತು 503ರ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಕೋರ್ಟ್ ರಿಜಿಸ್ಟ್ರಿಗೆ ನಿರ್ದೇಶಿಸಿರುವ ನ್ಯಾಯಾಲಯ, ಲಕ್ಷ್ಮಣ್ ಅವರಿಗೆ ನೋಟಿಸ್ ಜಾರಿ ಮಾಡಿದೆ. ಜೂನ್ 12ರೊಳಗೆ ಲಿಖಿತ ಉತ್ತರ ನೀಡಬೇಕು ಎಂದು ಸೂಚಿಸಿದೆ.


































