ಲಕ್ನೋ: ಕೇಂದ್ರ ಖಾತೆಯ ರಾಜ್ಯ ಸಚಿವೆ ಸಾಧ್ವಿ ನಿರಂಜನ್ ಜ್ಯೋ ತಿ ಅವರನ್ನು ಅಪಹರಿಸಲು ಯತ್ನಿಸಿ ವಿಫಲನಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯುವಕನನ್ನು ಬಂಧಿಸಲಾಗಿದೆ.
ಸಚಿವೆ ಸಾಧ್ವಿ ಕಾರು ಚಾಲಕ ನೀಡಿದ ದೂರಿನ ಪ್ರಕಾರ, ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಸಚಿವರನ್ನು ಕರೆ ತರುವ ನಿಟ್ಟಿನಲ್ಲಿ ಕಾರಿನಲ್ಲಿ ತೆರಳುತ್ತಿದ್ದಾಗ ಬಂತಾರಾ ಪೊಲೀಸ್ ಠಾಣಾ ವ್ಯಾಪ್ತಿಯ ನ್ಯೂ ಪ್ರಧಾನ್ ಧಾಬಾ ಬಳಿ ಟೀ ಕುಡಿಯಲು ನಿಲ್ಲಿಸಿದ್ದ ವೇಳೆ ವ್ಯಕ್ತಿಯೊಬ್ಬ ದಿಢೀರನೆ ಬಂದು ಗನ್ ತೋರಿಸಿ ಕಾರಿನೊಳಗೆ ಕುಳಿತು, ಚಾಲಕನನ್ನು ಕೆಳಗಿಳಿಸಿದ್ದಾನೆ.
ಕಾರಿನ ಸಹಿತ ಪರಾರಿಯಾಗಲು ಯತ್ನಿಸಿದ್ದ ವೇಳೆ ಭದ್ರತಾ ಸಿಬಂದಿಗಳು ಕಾರನ್ನು ಸುತ್ತುವರಿದು, ಯುವಕನನ್ನುಬಂಧಿಸಿ ಪೊಲೀಸರಿಗೆ ಒಪ್ಪಿಸಿರುವುದಾಗಿ ವರದಿ ವಿವರಿಸಿದೆ.
ಯುವಕನ ವಿರುದ್ಧ ಸಚಿವೆ ಸಾಧ್ವಿಯನ್ನು ಅಪಹರಿಸಲು ಯತ್ನಿಸಿರುವುದಾಗಿ ಆರೋಪಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಐಎಎನ್ ಎಸ್ ವರದಿ ತಿಳಿಸಿದೆ.


































