ಬೆಂಗಳೂರು: ಬರಗಾಲದ ಕುರಿತು ಸದನದಲ್ಲಿ ಇವತ್ತು ಕೂಡ ಚರ್ಚೆ ಆಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪ್ರತಿಕ್ರಿಯೆ ನೀಡಿದರು.
ಬೆಳಗಾವಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ ಅವರು ಪ್ರಶ್ನೆಗಳಿಗೆ ಉತ್ತರ ನೀಡಿದರು. ಈ ರಾಜ್ಯ ಸರಕಾರಕ್ಕೆ ಬರಗಾಲದ ಸಂದರ್ಭದಲ್ಲಿ ರೈತರಿಗೆ ಪರಿಹಾರ ಕೊಡಬೇಕೆಂಬ ಪ್ರಾಮಾಣಿಕ ಕಳಕಳಿ ಇಲ್ಲ. ಒಂದು ಕಡೆ ರೈತರಿಗೆ ಪರಿಹಾರ ಕೊಡುತ್ತಿಲ್ಲ. ಪರಿಹಾರ ಕೊಡಲು ಖಜಾನೆಯಲ್ಲಿ ಹಣ ಇಲ್ಲದಿದ್ದರೂ ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ಕೊಡುವುದಾಗಿ ಮುಖ್ಯಮಂತ್ರಿಗಳು ಮೊನ್ನೆ ಘೋಷಿಸಿದ್ದಾರೆ.
ಮತ್ತೊಂದು ಕಡೆ ಎಸ್ಸಿ, ಎಸ್ಟಿ ಸಮುದಾಯಕ್ಕಾಗಿ ಬಳಸಬೇಕಿದ್ದ ಎಸ್ಇಪಿಟಿಎಸ್ಪಿ ಹಣವನ್ನು ಬೇರೆಡೆಗೆ ಬಳಸಿಕೊಳ್ಳುತ್ತಾರೆ. ರಾಜ್ಯ ಸರಕಾರದ ಆದ್ಯತೆ ಸಂಕಷ್ಟದಲ್ಲಿರುವ ರೈತರಲ್ಲ. ಅದನ್ನು ಬಿಟ್ಟು ರಾಜಕಾರಣ ಮಾಡುವುದು, ಅಲ್ಪಸಂಖ್ಯಾತರನ್ನು ಓಲೈಸುವುದೇ ಅದರ ಪ್ರಥಮ ಆದ್ಯತೆಯಾಗಿದೆ ಎಂದು ಟೀಕಿಸಿದರು.
ಬರಗಾಲದ ಕುರಿತು ಸದನದಲ್ಲಿ ಇವತ್ತು ಕೂಡ ಚರ್ಚೆ ಆಗಲಿದೆ. ಈ ಎಲ್ಲ ಸಂಗತಿಗಳನ್ನು ಕೂಡ ಸದನದಲ್ಲಿ ಚರ್ಚಿಸುತ್ತೇವೆ ಎಂದು ತಿಳಿಸಿದರು.50ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಸರಕಾರಕ್ಕೆ 136 ಶಾಸಕರ ಬೆಂಬಲ ಇದೆ. ಎಷ್ಟು ಜನ ರೈತರು ಆತ್ಮಹತ್ಯೆ ಮಾಡಿಕೊಂಡರೂ ಕವಡೆ ಕಾಸಿನ ಕಿಮ್ಮತ್ತು ಕೊಡುವುದಿಲ್ಲ ಎಂಬ ಧಾಟಿಯಲ್ಲಿ ರಾಜ್ಯ ಸರಕಾರ ಆಡಳಿತ ಮಾಡುತ್ತಿದೆ. ಇವೆಲ್ಲವನ್ನೂ ಪ್ರಶ್ನಿಸುತ್ತೇವೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರ ಕೊಟ್ಟರು.
ಗೊಡ್ಡು ಬೆದರಿಕೆಗಳಿಗೆ ಹೆದರುವುದಿಲ್ಲ:
ಗುಲ್ಬರ್ಗದಲ್ಲಿ ಮಣಿಕಂಠ ರಾಠೋಡ್ ವಿಚಾರದಲ್ಲಿ ಮತ್ತೊಂದೆಡೆ ಪ್ರಿಯಾಂಕ್ ಖರ್ಗೆಯವರು ಪೊಲೀಸ್ ವರದಿ ಆಧಾರದಲ್ಲಿ ಹೇಳಿಕೆ ಕೊಟ್ಟಿದ್ದಾರೆ. ಪೊಲೀಸರು ಹೇಳಿದ್ದೆಲ್ಲವೂ ಸತ್ಯವೆಂದು ನಂಬುವುದಿಲ್ಲ. ಬಿಜೆಪಿ ಅಧ್ಯಕ್ಷನಾಗಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನ ರಕ್ಷಣೆ ಮಾಡುವುದು ನನ್ನ ಕರ್ತವ್ಯವಾಗಿದೆ.
ಇದು ನನ್ನ ಪ್ರಥಮ ಆದ್ಯತೆ. ಗೊಡ್ಡು ಬೆದರಿಕೆಗಳಿಗೆ ಹೆದರುವ ಪಕ್ಷ ಬಿಜೆಪಿ ಅಲ್ಲ. ರಾಜ್ಯಾಧ್ಯಕ್ಷನಾಗಿಯೂ ಹೆದರುವುದಿಲ್ಲ. ಇವೆಲ್ಲವನ್ನೂ ನಾವು ಎದುರಿಸುತ್ತೇವೆ ಎಂದು ತಿಳಿಸಿದರು.
ಅಧಿವೇಶನ ನಡೆಯುವ ಸಂದರ್ಭದಲ್ಲೇ ಬಿಜೆಪಿ ಕಾರ್ಯಕರ್ತ, ದಲಿತ ಮುಖಂಡನ ಮನೆಗೆ ಹೋಗಿ ಹೊರಗೆ ಕರೆದೊಯ್ದು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.
ಆದರೆ, ರಾಜ್ಯ ಸರಕಾರ, ಪೊಲೀಸರು 307ನೇ ವಿಧಿಯಡಿ ಕೊಲೆ ಯತ್ನದ ಪ್ರಕರಣ ದಾಖಲಿಸಿಲ್ಲ ಎಂದು ಆಕ್ಷೇಪಿಸಿದರು.
ಕಾಂಗ್ರೆಸ್ ಎಂಎಲ್ಸಿ ಹೆಸರನ್ನು ಎ1 ಆರೋಪಿ ಎಂದು ಉಲ್ಲೇಖಿಸಿದರೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಟೀಕಿಸಿದರು.