ಮಾಲೆ: ಮಾಲ್ಡೀವ್ಸ್ ನಿಂದ ಭಾರತವು ತನ್ನ ಎಲ್ಲಾ ಸೈನಿಕರನ್ನು ಹಿಂದಕ್ಕೆ ಕರೆಸಿಕೊಂಡಿದೆ ಎಂದು ಮಾಲ್ಡೀವ್ಸ್ ಸರ್ಕಾರ ತಿಳಿಸಿದೆ.
ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರು ಮೇ 10ರೊಳಗೆ ಭಾರತವು ತನ್ನ ಸಂಪೂರ್ಣ ಮಿಲಿಟರಿ ಸಿಬ್ಬಂದಿಯನ್ನು ಹಿಂದಕ್ಕೆ ಕರೆಯಿಸಿಕೊಳ್ಳಬೇಕು ಎಂದು ಗಡುವು ನೀಡಿದ್ದರು. ಕಳೆದ ವರ್ಷ ನಡೆದ ಅಧ್ಯಕ್ಷೀಯ ಚುನಾವಣೆ ವೇಳೆ ಭಾರತೀಯ ಸೇನಾ ಸಿಬ್ಬಂದಿಯನ್ನು ಹಿಂದಕ್ಕೆ ಕಳುಹಿಸುವುದಾಗಿ ಅವರು ಭರವಸೆ ನೀಡಿದ್ದರು.
ಇದೀಗ ಮಾಲ್ಡೀವ್ಸ್ ನಲ್ಲಿದ್ದ ಭಾರತೀಯ ಸೈನಿಕರ ಕೊನೇ ತಂಡವನ್ನು ಹಿಂತಿರುಗಿ ಕಳುಹಿಸಲಾಗಿದೆ. ದೇಶದಲ್ಲಿ ಎಷ್ಟು ಮಂದಿ ಭಾರತೀಯ ಸೇನೆಯ ಯೋಧರು ನೆಲೆಯೂರಿದ್ದರು ಎಂಬ ವಿವರವನ್ನು ನಂತರ ಬಹಿರಂಗಪಡಿಸಲಾಗುವುದು ಎಂದು ಅಧ್ಯಕ್ಷರ ಕಚೇರಿಯ ಮುಖ್ಯ ವಕ್ತಾರೆ ಹೀನಾ ವಾಲೀದ್ ಅವರು ಸನ್.ಎಂವಿ ತಿಳಿಸಿದ್ದಾರೆ.
ಭಾರತವು ತನ್ನ 51 ಯೋಧರನ್ನು ಹಿಂದಕ್ಕೆ ಕರೆಸಿಕೊಂಡಿದೆ ಎಂದು ವರದಿಯಾಗಿತ್ತು. ಈ ಯೋಧರು ಭಾರತ ಸರ್ಕಾರ ಈ ಹಿಂದೆ ಉಡುಗೊರೆಯಾಗಿ ನೀಡಿದ್ದ ಎರಡು ಹೆಲಿಕಾಪ್ಟರ್‌ಗಳು ಮತ್ತು ಡಾರ್ನಿಯರ್ ಯುದ್ಧ ವಿಮಾನಗಳ ನಿರ್ವಹಣೆ ಸಲುವಾಗಿ ಮಾಲ್ಡೀವ್ಸ್ ನಲ್ಲಿ ಉಳಿದುಕೊಂಡಿದ್ದರು.