ಬೆಂಗಳೂರು: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಮಾರಾಟ ಮಾಡಲು ನಗರದ 74 ನಿಗದಿತ ಮೈದಾನಗಳಲ್ಲಿ ತಾತ್ಕಾಲಿಕ ಅವಕಾಶ ನೀಡಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ. ಪಟಾಕಿ ಮಾರಾಟಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಕರೆಯಲಾಗಿದ್ದು, ಅನುಮತಿ ಕೋರಿ ಬಂದಿದ್ದ 1,518 ಅರ್ಜಿಗಳ ಪೈಕಿ ಲಾಟರಿ ಮೂಲಕ 315 ಅರ್ಜಿಗಳನ್ನ ಪರಿಗಣಿಸಲಾಗಿದೆ. ಪಟಾಕಿ ಮಾರಾಟಕ್ಕೆ ನಿಗದಿತ ಸ್ಥಳಗಳಲ್ಲಿ ಎಸಿಪಿ ಮಟ್ಟದ ಓರ್ವ ಪೊಲೀಸ್ ಅಧಿಕಾರಿ, ಬಿಬಿಎಂಪಿ, ವಿದ್ಯುತ್ ಇಲಾಖೆ, ಅಗ್ನಿಶಾಮಕ ಇಲಾಖೆ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರತಿನಿಧಿಗಳು ಹಾಜರಿರುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಆಯುಕ್ತರು ತಿಳಿಸಿದರು.
ದೀಪಾವಳಿ ಹಬ್ಬದ ಆಚರಣೆ ಸಂದರ್ಭದಲ್ಲಿ ಸಾರ್ವಜನಿಕರು ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಪಟ್ಟಿಯನ್ನ ಬೆಂಗಳೂರು ನಗರ ಪೊಲೀಸರು ಹೊರಡಿಸಿದ್ದಾರೆ. ಸೂಚನೆಗಳು ಹಸಿರು ಪಟಾಕಿಗಳನ್ನು ಖರೀದಿಸಿ, ಪರಿಸರ ಸ್ನೇಹಿ ದೀಪಾವಳಿ ಆಚರಿಸಿ ಹಸಿರು ಪಟಾಕಿಗಳನ್ನು ಖರೀದಿಸುವಾಗ ಅದರ ಮೇಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಖಚಿತಪಡಿಸಿಕೊಂಡು ಖರೀದಿ ಮಾಡಬೇಕು ಉತ್ತಮ ಗುಣಮಟ್ಟದ ಪಟಾಕಿಗಳನ್ನು ಅಧಿಕೃತವಾಗಿ ಪರವಾನಿಗೆ ಪಡೆದ ಅಂಗಡಿ/ಮಳಿಗೆಗಳಿಂದ (ಲೈಸೆನ್ಸ್ ಗಳನ್ನು ಅಂಗಡಿಗಳಲ್ಲಿ ಪ್ರದರ್ಶಿಸಿರುವುದನ್ನು ಖಚಿತ ಪಡಿಸಿಕೊಂಡು) ಪಟಾಕಿಗಳನ್ನು ಖರೀದಿಸುವುದು ದೀಪಾವಳಿ ಸಮಯದಲ್ಲಿ ಅನಧಿಕೃತವಾಗಿ ಪಟಾಕಿಗಳನ್ನು ಮಾರುವ ಅಂಗಡಿಗಳಿಂದ ಖರೀದಿಸಬೇಡಿ ಅತಿ ಹೆಚ್ಚು ಶಬ್ಧ ಹಾಗೂ ವಾಯುಮಾಲಿನ್ಯವುಂಟುಮಾಡುವ ಪಟಾಕಿಗಳನ್ನು ಖರೀದಿಸಬಾರದು ಹಳೆಯ ಹಾಗೂ ಹಾಳಾದ ಪಟಾಕಿಗಳನ್ನು ಕೊಂಡುಕೊಳ್ಳಬಾರದು ಮತ್ತು ಅವುಗಳನ್ನು ಬಳಸಬಾರದು ಪಟಾಕಿಗಳನ್ನು ಚಿಕ್ಕ ಮಕ್ಕಳು ಹಚ್ಚಲು ಅವಕಾಶ ಮಾಡಿಕೊಡಬೇಡಿ. ಚಿಕ್ಕ ಮಕ್ಕಳೊಂದಿಗೆ ಅವರ ಪೋಷಕರೂ ಸಹ ಜೊತೆಯಲ್ಲಿದ್ದು, ಸುರಕ್ಷಿತವಾಗಿ ಪಟಾಕಿ ಹಚ್ಚುವಂತೆ ಗಮನ ಹರಿಸಬೇಕು.
ಚಿಕ್ಕ ಮಕ್ಕಳು ಹೆಚ್ಚು ಅಪಾಯಕಾರಿಯಾದ ಪಟಾಕಿಗಳನ್ನು ಹಚ್ಚದಂತೆ ನೋಡಿಕೊಳ್ಳುವುದು ಹಾಗೂ ಪಟಾಕಿಗಳನ್ನು ಹಚ್ಚುವಾಗ ದೂರದಲ್ಲಿ ನಿಂತು ನೋಡುವಂತೆ ವ್ಯವಸ್ಥೆ ಮಾಡುವುದು. ಚಿಕ್ಕ ಮಕ್ಕಳು ಪಟಾಕಿ ಹಚ್ಚುವಾಗ ಉದ್ದನೆಯ ಊದುಬತ್ತಿಗಳನ್ನು ಬಳಸುವಂತೆ ಮಕ್ಕಳಿಗೆ ಸೂಚನೆಗಳನ್ನು ನೀಡುವುದು ಮತ್ತು ಮಕ್ಕಳ ಮೇಲೆ ನಿಗಾ ವಹಿಸುವುದು. ಜನನಿಬಿಡ ಪ್ರದೇಶಗಳಲ್ಲಿ, ಮುಖ್ಯ ರಸ್ತೆಗಳಲ್ಲಿ ಹಾಗೂ ವಾಹನಗಳನ್ನು ಪಾರ್ಕಿಂಗ್ ಮಾಡಿರುವ ಸ್ಥಳಗಳಲ್ಲಿ ಪಟಾಕಿಗಳನ್ನು ಸಿಡಿಸಬಾರದು. ತೆರೆದ ಮೈದಾನದಲ್ಲಿ, ಜನಜಂಗುಳಿ ಕಡಿಮೆ ಇರುವ ಪ್ರದೇಶಗಳಲ್ಲಿ ಸುರಕ್ಷಿತ ಕ್ರಮಗಳನ್ನು ಅನುಸರಿಸಿಕೊಂಡು ಪಟಾಕಿಗಳನ್ನು ಹಚ್ಚುವುದು ಸೂಕ್ಷ್ಮ ಪ್ರದೇಶಗಳಾದ ಆಸ್ಪತ್ರೆ, ಪೆಟ್ರೋಲ್ ಬಂಕ್, ಅನಿಲ ಕೇಂದ್ರಗಳು, ಧಾರ್ಮಿಕ ಸ್ಥಳಗಳು, ವೃದ್ಧಾಶ್ರಮ, ಶಿಶುಪಾಲನಾ ಕೇಂದ್ರಗಳ ಸುತ್ತ-ಮುತ್ತ ಪಟಾಕಿಗಳನ್ನು ಸಿಡಿಸದಂತೆ ನೋಡಿಕೊಳ್ಳುವುದು ಪಟಾಕಿಗಳನ್ನು ಹಚ್ಚುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಪಟಾಕಿಗಳನ್ನು ಸಿಡಿಸುವಾಗ ಮೂಕ ಪ್ರಾಣಿಗಳಿಗೆ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸುವುದು. ಪಟಾಕಿ ಸಿಡಿಸುವ ಸಂದರ್ಭದಲ್ಲಿ ಕೈಗಳಿಗೆ ಗ್ಲೌಸ್ ಧರಿಸುವುದು, ಕಣ್ಣುಗಳಿಗೆ ಸುರಕ್ಷತಾ ಕನ್ನಡಕಗಳನ್ನು ಧರಿಸುವುದು ಹಾಗೂ ಅಗ್ನಿ ನಂದಿಸುವ ನೀರು, ಮರಳು, ಬೆಂಕಿ ನಂದಿಸುವ ಸಿಲಿಂಡರ್‌ಗಳನ್ನು ಹತ್ತಿರದಲ್ಲಿ ಇಟ್ಟುಕೊಳ್ಳುವುದು ಪಟಾಕಿಗಳನ್ನು ಸಿಡಿಸುವಾಗ ಹೆಚ್ಚು ಜಾಗರೂಕರಾಗಿರಬೇಕು, ನಂದಿಸುವ ಕೆಲಸವನ್ನು ಹೆಚ್ಚು ಎಚ್ಚರಿಕೆಯಿಂದ ಮಾಡಬೇಕು.
ಹಾಗೂ ಬಳಸಿದ ಪಟಾಕಿಗಳನ್ನು ಬಕೆಟ್‌ನಲ್ಲಿಟ್ಟು ಅದಕ್ಕೆ ಮರಳು ಅಥವಾ ನೀರನ್ನು ಹಾಕಿ ನಂದಿಸಬೇಕು. ಮೊದಲ ಪ್ರಯತ್ನದಲ್ಲಿ ಸಿಡಿಯದ ಪಟಾಕಿಗಳನ್ನು ಹತ್ತಿರಕ್ಕೆ ಹೋಗಿ ಮತ್ತೊಮ್ಮೆ ಪರೀಕ್ಷಿಸಬೇಡಿ ಪಟಾಕಿ ಹಚ್ಚುವ ವೇಳೆ ಧರಿಸಿರುವ ಬಟ್ಟೆಗಳ ಬಗ್ಗೆ ಮೇಲೆ ಹೆಚ್ಚು ಜಾಗರೂಕತೆಯಿಂದಿರಬೇಕು. ಈ ಸಮಯದಲ್ಲಿ ಹತ್ತಿಯ ಬಟ್ಟೆಯನ್ನು ಧರಿಸುವುದು ಉತ್ತಮ. ಆದಷ್ಟು ಸಿಂಥಟಿಕ್, ನೈಲಾನ್, ಪಾಲಿಸ್ಟರ್ ಬಟ್ಟೆಗಳನ್ನು ಧರಿಸಬೇಡಿ. ಕೈಯಲ್ಲಿ ಪಟಾಕಿಗಳನ್ನು ಹಿಡಿದು ಹಚ್ಚುವುದು ಅಪಾಯಕಾರಿ. ದೇಹದ ಸೂಕ್ಷ್ಮ ಅಂಗಾಂಗಗಳಾದ ಕಿವಿ, ಕಣ್ಣು, ಬಾಯಿ, ಅಂಗಗಳ ಮೇಲೆ ಹೆಚ್ಚು ಗಮನವಿರಲಿ. ಪಟಾಕಿ ಸಿಡಿಸುವ ಸಂದರ್ಭದಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನು ಹತ್ತಿರದಲ್ಲಿಟ್ಟುಕೊಳ್ಳಬೇಕು ಪಟಾಕಿ ಸಿಡಿಸುವ ಸಂದರ್ಭದಲ್ಲಿ ಯಾವುದಾದರೂ ಅವಘಡಗಳು ಸಂಭವಿಸಿದಲ್ಲಿ ತಕ್ಷಣವೇ 112 ಹಾಗೂ 108 ಸಹಾಯವಾಣಿಯನ್ನ ಸಂಪರ್ಕಿಸುವುದು ಹಾಗೂ ವೈದ್ಯರ ಸಲಹೆಯನ್ನು ಪಡೆದುಕೊಳ್ಳುವುದು ಸಿಡಿಯದ, ಠುಸ್ ಆಗಿರುವ ಪಟಾಕಿಗಳನ್ನು ಗುಡ್ಡೆ ಹಾಕಿ ಬೆಂಕಿ ಹಚ್ಚುವುದು ಹೆಚ್ಚು ಅಪಾಯಕಾರಿ ಪಟಾಕಿ ಸಿಡಿಸಿದ ನಂತರ ಮೈದಾನ/ರಸ್ತೆಗಳು/ಮನೆ ಮುಂದಿನ ಅಂಗಳಗಳಲ್ಲಿ ಸ್ವಚ್ಚತೆಯನ್ನು ಕಾಪಾಡುವುದು. ಸರ್ಕಾರ ಬಿಬಿಎಂಪಿ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಮಾಲಿನ್ಯ ನಿಯಂತ್ರಣಾ ಇಲಾಖೆಗಳಿಂದ ನೀಡಿರುವ ಆದೇಶಗಳು ಹಾಗೂ ಸಲಹಾ-ಸೂಚನೆಗಳನ್ನು ಚಾಚು ತಪ್ಪದೇ ಪಾಲಿಸುವುದು ಹೆಚ್ಚು ಶಬ್ಧ ಬರುವಂತಹ ಪಟಾಕಿಗಳನ್ನು ಹಚ್ಚುವುದರಿಂದ ನೆರೆ-ಹೊರೆಯವರಲ್ಲಿರುವ ಹಿರಿಯ ನಾಗರೀಕರಿಗೆ, ಅನಾರೋಗ್ಯ ಪೀಡಿತರಿಗೆ, ವಿದ್ಯಾರ್ಥಿಗಳಿಗೆ ತೊಂದರೆಯಾಗುವ ಸಂಭವವಿರುವುದರಿಂದ ಕಡಿಮೆ ಶಬ್ಧವಿರುವ ಹಸಿರು ಪಟಾಕಿಗಳನ್ನ ಹಚ್ಚುವುದು ಸೂಕ್ತ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ನಿಗಧಿತ ಸಮಯದಲ್ಲಿ ಅಂದರೆ ರಾತ್ರಿ 10 ಗಂಟೆಯವರೆಗೆ ಮಾತ್ರ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಪಟಾಕಿಗಳನ್ನು ಸಿಡಿಸುವ ಮೂಲಕ ಹಬ್ಬವನ್ನ ಆಚರಿಸಬೇಕು. ನಿಗದಿತ ಅವಧಿ ಹೊರತುಪಡಿಸಿ ಪಟಾಕಿ ಸಿಡಿಸಿದರೆ ಅಂಥವರ ವಿರುದ್ಧ ನಿಯಮ ಉಲ್ಲಂಘನೆ ಆರೋಪದಡಿ ಕ್ರಮ ಕೈಗೊಳ್ಳಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.