ದುಬೈ: ದುಬೈನಲ್ಲಿ ಕಳೆದ 24 ಗಂಟೆಗಳಿಂದ ಭಾರಿ ಮಳೆ ಯಾಗುತ್ತಿದ್ದು ವಿಮಾನ ನಿಲ್ದಾಣ ಜಲಾವೃತಗೊಂಡಿದೆ. ಕೆಲವು ವಿಮಾನ ಗಳ ಹಾರಾಟ ಸ್ಥಗಿತಗೊಂಡಿದೆ. ಮಳೆಯಿಂದಾಗಿ ಯುಎಇಯ ಪ್ರಮುಖ ಹೆದ್ದಾರಿಗಳ ಭಾಗಗಳು ಜಲಾವೃತಗೊಂಡಿದ್ದು ರಸ್ತೆಗಳಲ್ಲಿ ವಾಹನಗಳು ಸಿಲುಕಿಕೊಂಡಿವೆ.
ವಿಶ್ವದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾದ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (DXB) ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ಹಲವು ವಿಮಾನಗಳು ರದ್ದಾಗಿದ್ದು, ಹಲವು ವಿಮಾನಗಳು ವಿಳಂಬಗೊಂಡಿವೆ.
ಭಾರೀ ಮಳೆಯಿಂದಾಗಿ, ಯುಎಇ ಆಡಳಿತವು ಮಂಗಳವಾರ ಜನರನ್ನು ತಮ್ಮ ಮನೆಗಳಲ್ಲಿ ಇರುವಂತೆ ಮನವಿ ಮಾಡಿದೆ. ಶಾಲೆಗಳು ಆನ್ಲೈನ್ನಲ್ಲಿ ತರಗತಿಗಳನ್ನು ನಡೆಸುತ್ತಿದ್ದ. ಸರ್ಕಾರಿ ನೌಕರರಿಗೂ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಲಾಗಿದೆ.
ರಾಷ್ಟ್ರೀಯ ಹವಾಮಾನ ಕೇಂದ್ರವು ದುಬೈ, ಅಬುಧಾಬಿ, ಶಾರ್ಜಾ ಮತ್ತು ಇತರ ಕೆಲವು ಎಮಿರೇಟ್ಗಳ ನಿವಾಸಿಗಳಿಗೆ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆ ಮತ್ತು ಆಲಿಕಲ್ಲು ಮಳೆ ಸುರಿಯಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಯುಎಇಯ ನೆರೆಯ ದೇಶಗಳಾದ ಬಹ್ರೇನ್, ಕತಾರ್ ಮತ್ತು ಸೌದಿ ಅರೇಬಿಯಾದಲ್ಲೂ ಭಾರೀ ಮಳೆಯಾಗಿದೆ.
ಒಮಾನ್ನಲ್ಲಿ ಇತ್ತೀಚಿನ ದಿನಗಳಲ್ಲಿ ಭಾರೀ ಮಳೆಯಿಂದ ಉಂಟಾದ ಪ್ರವಾಹದಿಂದಾಗಿ 18 ಜನರು ಸಾವನ್ನಪ್ಪಿದ್ದಾರೆ. ಇವರಲ್ಲಿ 10 ಶಾಲಾ ಮಕ್ಕಳ ವಾಹನ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ಬಹ್ರೇನ್ನ ರಾಜಧಾನಿ ಮನಾಮದಲ್ಲಿ ಬೀದಿಗಳು ಜಲಾವೃತಗೊಂಡಿವೆ. ಬುಧವಾರ ಕುವೈತ್, ಸೌದಿ ಅರೇಬಿಯಾ ಮತ್ತು ಒಮಾನ್ನಲ್ಲಿ ಚಂಡಮಾರುತದ ಸಾಧ್ಯತೆ ಇದೆ.
 
				 
         
         
         
															 
                     
                     
                    


































 
    
    
        