ನವದೆಹಲಿ: ದೇಶದ ಮೊದಲ ಬುಲೆಟ್ ರೈಲು ಬೆಂಗಳೂರಿನಲ್ಲಿ ತಯಾರಾಗುವ ಸಾಧ್ಯತೆಗಳಿವೆ. ಇಂಟೆಗ್ರಲ್ ಕೋಚ್ ಫ್ಯಾಕ್ಟರಿ ಕರೆದಿದ್ದ ಟೆಂಡರ್ನಲ್ಲಿ ಬೆಮೆಲ್ ಮಾತ್ರ ಭಾಗಿಯಾಗಿದ್ದು, ಇದು ಅಂತಿಮಗೊಳ್ಳುವ ಸಾಧ್ಯತೆ ಇದೆ. ಮುಂಬೈ-ಅಹಮದಾಬಾದ್ ನಡುವಿನ ಮಾರ್ಗದಲ್ಲಿ ಈ ರೈಲು ಸಂಚಾರ ನಡೆಸಲಿದ್ದು, ಬೆಮೆಲ್ನ ಬೆಂಗಳೂರಿನ ಘಟಕದಲ್ಲೇ ರೈಲು ತಯಾರಾಗಲಿದೆ ಎನ್ನಲಾಗಿದೆ.“8 ಬೋಗಿಗಳನ್ನು ಒಳಗೊಂಡಿರುವ 2 ಬುಲೆಟ್ ರೈಲುಗಳ ನಿರ್ಮಾಣಕ್ಕೆ ಬೆಮೆಲ್ ಮಾತ್ರ ಅರ್ಜಿ ಸಲ್ಲಿಸಿದೆ, 1 ವಾರದಲ್ಲಿ ಟೆಂಡರ್ ಅಂತಿಮಗೊಳ್ಳಲಿದೆ’ ಎಂದು ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯ ಮುಖ್ಯಸ್ಥ ಸುಬ್ಟಾ ರಾವ್ ಹೇಳಿದ್ದಾರೆ. ಸದ್ಯಕ್ಕೆ 2 ರೈಲು ನಿರ್ಮಾಣಕ್ಕೆ ಮಾತ್ರ ಟೆಂಡರ್ ಕರೆಯಲಾಗಿದ್ದು, ಮುಂದಿನ 2.5 ವರ್ಷಗಳಲ್ಲಿ ಪೂರ್ಣ ಗೊಳ್ಳುವ ವಿಶ್ವಾಸವಿದೆ ಎಂದು ಮುಖ್ಯಸ್ಥರು ತಿಳಿಸಿದ್ದಾರೆ.
