ಖ್ಯಾತ ತಮಿಳು ಚಿತ್ರ ನಟ ಕಮಲ್ ಹಾಸನ್ ಅವರ ಮಾಜಿ ಪ್ರೇಯಸಿ, ನಟಿ ಗೌತಮಿ ತಮಗೆ 25 ಕೋಟಿ ರೂ. ವಂಚನೆಯಾಗಿದೆ ಎಂದು ಚೆನ್ನೈ ಸಿಟಿ ಪೊಲೀಸ್ ಕಮಿಷನರ್ ಗೆ ದೂರು ಸಲ್ಲಿಸಿದ್ದಾರೆ.
ಅಳಗಪ್ಪನ್ ಕಂಪೆನಿಯ ಮುಖ್ಯಸ್ಥರು ತಮಗೆ ಮೋಸ ಮಾಡಿದ್ದೂ, ನ್ಯಾಯ ಕೊಡಿಸುವಂತೆ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಶ್ರೀಪರೆಂಬುದುರ್ ನಲ್ಲಿ ನಟಿ ಗೌತಮಿ ಅವರಿಗೆ ಸೇರಿದ್ದ 46 ಎಕರೆ ಜಮೀನನ್ನು ಮಾರಾಟ ಮಾಡಲು ಅಳಗಪ್ಪನ್ ಕಂಪೆನಿಗೆ ಪವರ್ ಆಫ್ ಅಟಾರ್ನಿ ನೀಡಿದ್ದರು. ಇದನ್ನು ಕಂಪೆನಿ ಮುಖ್ಯಸ್ಥರು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಗೌತಮಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅಲ್ಲದೇ, ತಮ್ಮ ಕೃಷಿ ಭೂಮಿಯನ್ನು ನಾಲ್ಕು ಕೋಟಿ ರೂಪಾಯಿಗೆ ಮಾರಾಟ ಮಾಡಿ ಕಂಪೆನಿ ತಮಗೆ ಕೇವಲ 62 ಲಕ್ಷ ರೂಪಾಯಿಯನ್ನು ಮಾತ್ರ ನೀಡಿದೆ ಎಂದು ಅವರು ತಿಳಿಸಿದ್ದಾರೆ.
ಕೇವಲ ಹಣದಲ್ಲಿ ವಂಚನೆ ಮಾಡಿರುವುದು ಮಾತ್ರವಲ್ಲ ತಮ್ಮ ಸಹಿಯನ್ನೂ ಕೂಡ ಫೋರ್ಜರಿ ಮಾಡಲಾಗಿದೆ ಎಂದು ಆರೋಪಿಸಿರುವ ಗೌತಮಿ, ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ತಮಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಹೇಳಿದ್ದಾರೆ.
ತಾವು ಕಷ್ಟಪಟ್ಟು ಸಂಪಾದನೆ ಮಾಡಿರುವ ಆಸ್ತಿಯನ್ನು ಅನಿವಾರ್ಯ ಕಾರಣಗಳಿಂದ ಮಾರಾಟಕ್ಕೆ ಮುಂದಾಗಿದ್ದೆ. ಆದರೆ, ಈ ರೀತಿ ಮೋಸವಾಗಿದೆ ಎಂದು ಅವರು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.