ಬೆಂಗಳೂರು : ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ರಾಸಲೀಲೆ ವಿಡಿಯೋ ಬಹಿರಂಗದ ಹಿಂದೆ ದೊಡ್ಡ ತಿಮಿಂಗಿಲ ಇದೆ ಎನ್ನುವ ಮಾಜಿ ಸಿಎಂ ಕುಮಾರಸ್ವಾಮಿ ಅವರು ಮೊದಲು ದಾಖಲೆ ಕೊಡಲಿ. ಆ ಬಳಿಕ ಎಸ್ ಐ ಟಿ ಆ ಬಗ್ಗೆಯೂ ತನಿಖೆ ಮಾಡುತ್ತೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರು ಹೇಳಿದರು. ಬುಧವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಪ್ರಕರಣ ಕ್ಕೆ ಸಂಬಂಧಿಸಿದಂತೆ ಸಾಹಿತಿಗಳು ಮುಖ್ಯಮಂತ್ರಿಯವರಿಗೆ ಬರೆದ ಪತ್ರವನ್ನು ನಾನು ನೋಡಿಲ್ಲ. ಕೂಡಲೇ ಅದನ್ನು ತರಿಸಿಕೊಂಡು ನೋಡುವೆ ಎಂದರು. ಇನ್ನು ವಿದೇಶದಲ್ಲಿದ್ದುಕೊಂಡು ಬೆಂಗಳೂರಿಗೆ ಬರುವ ವಿಚಾರದಲ್ಲಿ ಪದೆ ಪದೆ ವಿಮಾನ ಟಿಕೆಟ್ ಬುಕ್ ಮಾಡಿ ಬಳಿಕ ರದ್ದು ಮಾಡುತ್ತ ಕಣ್ಣಾ ಮುಚ್ಚಾಲೆ ಆಡುತ್ತಿರುವ ಅತ್ಯಾಚಾರ ಆರೋಪಿ ಪ್ರಜ್ವಲ್ ರೇವಣ್ಣ ಈಗ ಎಲ್ಲಿದ್ದಾರೆ? ಎಂಬ ಬಗ್ಗೆ ನಿಮಗೆ ಮಾಹಿತಿ ಇದೆಯೆ? ಎಂಬ ಪ್ರಶ್ನೆಗೆ, ನಮಗೆ ಗೊತ್ತಿಲ್ಲ. ನಿಮಗೇನಾದರೂ ಗೊತ್ತಿದೆಯೆ? ಎಂದು ಮರು ಪ್ರಶ್ನೆ ಮಾಡಿದರು. ಬಳಿಕ ಮಾತು ಮುಂದುವರಿಸಿದ ಗೃಹಸಚಿವರು, ಎಸ್ ಐ ಟಿ ಯವರಿಗೆ ಮಾಹಿತಿ ಇರುತ್ತೆ. ಹಾಗಂತ ಸಾರ್ವಜನಿಕವಾಗಿ ಎಲ್ಲವನ್ನು ಬಹಿರಂಗ ಮಾಡಲು ಬರುವುದಿಲ್ಲ ಎಂದು ಸಮಜಾಯಿಷಿ ನೀಡಿದರು.
