ಹಾಸನ : ಸಂಸದ ಪ್ರಜ್ವಲ್ ರೇವಣ್ಣ ಅವರ ಹಾಸನದ ನಿವಾಸದಲ್ಲಿ ಮಂಗಳವಾರ ಮಧ್ಯಾಹ್ನ ಎಸ್‌ಐಟಿ ಅಧಿಕಾರಿಗಳು ಆರಂಭಿಸಿದ್ದ ಪರಿಶೀಲನೆ, ಸಾಕ್ಷ್ಯ ಸಂಗ್ರಹ ಇಂದು ಮುಂಜಾನೆ ಪೂರ್ಣಗೊಂಡಿದೆ. ಈ ವೇಳೆ ಪ್ರಜ್ವಲ್ ರೇವಣ್ಣ ಬಳಸುತ್ತಿದ್ದ ಹಾಸಿಗೆ, ದಿಂಬು ಹಾಗೂ ಹೊದಿಕೆಯನ್ನು ಎಸ್‌ಐಟಿ ತಂಡ ವಶಕ್ಕೆ ಪಡೆದುಕೊಂಡಿದೆ.
ಪ್ರಜ್ವಲ್ ವಿಚಾರಣೆ ವೇಳೆ ಮಹತ್ವದ ದಾಖಲೆ ಸಂಗ್ರಹಿಸಲು ಮುಂದಾದ ಎಸ್‌ಐಟಿ ತಂಡ ಸತತ ಹತ್ತು ಗಂಟೆಗಳ ಕಾಲ ಪ್ರಜ್ವಲ್ ರೇವಣ್ಣ ನಿವಾಸದಲ್ಲಿ ಪರಿಶೀಲನೆ ನಡೆಸಿದೆ. ಈ ವೇಳೆ ಪ್ರಜ್ವಲ್ ರೇವಣ್ಣ ಮಲಗುತ್ತಿದ್ದ ಕೊಠಡಿಯಲ್ಲಿದ್ದ ಹಾಸಿಗೆ, ದಿಂಬು, ಹೊದಿಕೆ ಹಾಗೂ ಇತರೆ ವಸ್ತುಗಳನ್ನು ಎಸ್‌ಐಟಿ ವಶಕ್ಕೆ ಪಡೆದಿದ್ದು, ಆ ವಸ್ತುಗಳನ್ನು ಬೆಂಗಳೂರಿಗೆ ತನಿಖೆಗಾಗಿ ತರುತ್ತಿದೆ.
ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ವಾಪಾಸ್ಸಾಗುವ ಬಗ್ಗೆ ಹಾಗೂ ಎಸ್‌ಐಟಿ ಮುಂದೆ ಹಾಜರಾಗುವ ಬಗ್ಗೆ ವಿದೇಶದಿಂದಲೇ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಇದೀಗ ಪ್ರಜ್ವಲ್ ವಾಪಾಸ್ಸಾಗುವ ದಿನಾಂಕ ಸಮೀಪಿಸುತ್ತಿದ್ದಂತೆ ಎಸ್‌ಐಟಿ ತಂಡ ಹಾಸನದ ಸಂಸದರ ನಿವಾಸದಲ್ಲಿ ಸಾಕ್ಷ್ಯ ಸಂಗ್ರಹಿಸಲು ಮುಂದಾಗಿದೆ.