ಉತ್ತರ ಪ್ರದೇಶ : ಪ್ರೀತಿಸಿ ಮೋಸ ಮಾಡಿದರೆ ಯುವಕರು ಪ್ರೇಯಸಿಯನ್ನು ಹತ್ಯೆ ಮಾಡುವುದನ್ನು, ಆ್ಯಸಿಡ್ ಎರಚುವ ಸುದ್ದಿಗಳನ್ನು ಕೇಳುತ್ತೇವೆ. ಆದರೆ, ಉತ್ತರ ಪ್ರದೇಶದಲ್ಲಿ ವಿಭಿನ್ನವಾದ ಘಟನೆ ನಡೆದಿದೆ. ಇಲ್ಲಿ ಪ್ರೇಯಸಿಯೊಬ್ಬಳು ತನ್ನ ಪ್ರಿಯಕರನ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾರೆ. ಮಂಗಳವಾರ(ಏ.23) ಬಲಿಯಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಯುವತಿ ಈ ರೀತಿ ದುಷ್ಕೃತ್ಯ ಮೆರೆಯಲು ಕಾರಣ ‘ಪ್ರೀತಿ’. ಆಕೆಯ ಪ್ರಿಯತಮ ಪ್ರೀತಿಸಿ ಮೋಸ ಮಾಡಿ ಮತ್ತೊಬ್ಬಳನ್ನು ಮದುವೆಯಾಗಲು ಮುಂದಾಗಿದ್ದ ಎನ್ನಲಾಗಿದೆ. ಹೀಗಾಗಿ ಯುವತಿ ಆತನ ಮುಖದ ಮೇಲೆ ಆ್ಯಸಿಡ್ ಎರಚಿದ್ದಾಳೆ. ಮದುವೆಯ ಮೆರವಣಿಗೆಯ ವೇಳೆ ಯುವತಿ ವೇಷ ಮರೆಸಿಕೊಂಡು ಬಂದು ವರನ ಮುಖಕ್ಕೆ ಆ್ಯಸಿಡ್ ಎರಚಿದ್ದಾಳೆ ಎನ್ನಲಾಗಿದೆ.
ಆ್ಯಸಿಡ್ ಬಿದ್ದ ಪರಿಣಾಮ ಗಾಯಗೊಂಡ ಯುವಕನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವಕನಿಗೆ ಆ್ಯಸಿಡ್ ಎರಚಿದ ಯುವತಿಯನ್ನು ಹಿಡಿದ ಮಹಿಳೆಯರು ಸರಿಯಾಗಿ ಥಳಿಸಿದ್ದು, ಪೊಲೀಸರಿಗೆ ಒಪ್ಪಿಸಿದ್ದಾರೆ. ಯುವಕನ ತಾಯಿಯ ದೂರಿನ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 326 ಬಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಬಲಿಯಾದ ಪೊಲೀಸ್ ಅಧಿಕಾರಿ ಮುನ್ನಾ ಲಾಲ್ ಯಾದವ್ ತಿಳಿಸಿದ್ದಾರೆ.
 
				 
         
         
         
															 
                     
                     
                     
                    


































 
    
    
        