ಬೆಂಗಳೂರು: ಬಂದ್ಗೆ ಕರೆ ಕೊಟ್ಟಿರುವ ಸಂಘಟನೆಗಳಿಗೆ ಬಂದ್ ಕೈ ಬಿಡುವಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮನವಿ ಮಾಡಿದ್ದಾರೆ.
ಬೆಂಗಳೂರು ಬಂದ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಸಂಘಟನೆಗಳಿಗೆ ಬಂದ್ ಮಾಡದಂತೆ ಮನವಿ ಮಾಡಿದ್ದೇನೆ. ಮತ್ತೊಂದು ಬಾರಿ ಮನವಿ ಮಾಡುತ್ತೇನೆ. ನೀವು ಪ್ರತಿಭಟನೆ ಮಾಡಲು ನಮ್ಮ ತಕರಾರು ಇಲ್ಲ. ಪ್ರತಿಭಟನೆ ಮಾಡೋದು ನಿಮ್ಮ ಹಕ್ಕು. ರಾಜ್ಯದ ಹಿತದೃಷ್ಟಿಯಿಂದ ಪ್ರತಿಭಟನೆ ಮಾಡಬಹುದು. ಆದರೆ ಯಾವುದೇ ಅಹಿತಕರ ಘಟನೆಗೆ ಅವಕಾಶ ಕೊಡಬಾರದು. ಸಾರ್ವಜನಿಕ ಆಸ್ತಿಗಳಿಗೆ ತೊಂದರೆ ಮಾಡಬಾರದು. ಜನರಿಗೆ ತೊಂದರೆ ಮಾಡಬಾರದು. ಕಾನೂನುಬಾಹಿರ ಚಟುವಟಿಕೆಗಳು ಆಗದಂತೆ ನೋಡಿಕೊಳ್ಳಬೇಕು ಎಂದರು.
ಬೆಂಗಳೂರಿನಲ್ಲಿ ಬಂದ್ ಮಾಡುವಾಗ ಸ್ವಲ್ಪ ಆತಂಕ ಇರುತ್ತದೆ. ಜನ ಸಮುದಾಯ ಓಡಾಡಲು ಸಮಸ್ಯೆ ಆಗುತ್ತದೆ. ಇದೆಲ್ಲವನ್ನೂ ಗಮನಕ್ಕೆ ತೆಗೆದುಕೊಂಡಿದ್ದೇವೆ. ಪೊಲೀಸ್ ಇಲಾಖೆ ಏನೆಲ್ಲಾ ಕ್ರಮ ತೆಗೆದುಕೊಳ್ಳಬೇಕೋ ಅದೆಲ್ಲವನ್ನು ತೆಗೆದುಕೊಳ್ಳಲಾಗಿದೆ. ಈಗಾಗಲೇ ಅಧಿಕಾರಿಗಳ ಸಭೆ ಮಾಡಿಕೊಂಡು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಬಂದ್ ಮಾಡುವುದರಿಂದ ನಮ್ಮ ಸಮಸ್ಯೆ ಬಗೆಹರಿಯುವುದಿಲ್ಲ. ನಮಗೆ ನೀರಿಲ್ಲದ ಕಾಲದಲ್ಲಿ ನೀರು ಬಿಡಿ ಎಂದು ಹೇಳುತ್ತಿದ್ದಾರೆ. ಕಾವೇರಿ ಬೋರ್ಡ್ ಅವರಿಗೆ ಒಂದು ಸಂದೇಶ ಕೊಟ್ಟ ಹಾಗೆ ಆಗುತ್ತದೆ ಎಂದು ಸಂಘಟನೆಗಳು ಬಂದ್ ಮಾಡುತ್ತಿದ್ದಾರೆ ಎನಿಸುತ್ತಿದೆ. ಸರ್ಕಾರ ಏನು ಕೆಲಸ ಮಾಡಬೇಕೋ ಅದನ್ನು ಮಾಡಿದೆ. ಬೋರ್ಡ್ ಮತ್ತು ಸುಪ್ರೀಂ ಕೋರ್ಟ್ನಲ್ಲಿ ನಮ್ಮ ವಕೀಲರ ತಂಡ ಎಫೆಕ್ಟಿವ್ ಆಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಒಂದೊಂದು ಸಾರಿ ಕಾನೂನಿನ ವ್ಯವಸ್ಥೆ ಯಾವ ಕಡೆ ಹೋಗುತ್ತದೆ ಎಂದು ಹೇಳಲು ಆಗುವುದಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಬಂದ್ಗೆ ಬಿಜೆಪಿ-ಜೆಡಿಎಸ್ ಬೆಂಬಲ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರಿಬ್ಬರು ಈಗ ತಾನೆ ಒಂದಾಗಿದ್ದಾರೆ. ದೋಸ್ತಿ ಮಾಡಿಕೊಂಡಿದ್ದಾರೆ. ಹಾಗಾಗಿ ಒಂದು ಪ್ರದರ್ಶನ ಮಾಡಬೇಕು ಅಲ್ಲವಾ. ಅದಕ್ಕೆ ಬಂದ್ಗೆ ಬೆಂಬಲ ಕೊಡುತ್ತಿದ್ದಾರೆ. ರಾಜ್ಯದ ಹಿತದೃಷ್ಟಿ ಅವರಿಗೂ ಇದೆ. ಬಿಜೆಪಿ-ಜೆಡಿಎಸ್ ಕೂಡಾ ಜವಾಬ್ದಾರಿಯುತವಾಗಿ ನಡೆದುಕೊಂಡರೆ ಒಳ್ಳೆಯದು ಎಂದು ತಿರುಗೇಟು ನೀಡಿದರು.


































