ನವದೆಹಲಿ: ಆರ್ಬಿಐ ಬಡ್ಡಿದರ ಶೇ.6.5ರಲ್ಲೇ ಮುಂದುವರೆಸಲು ನಿರ್ಧಾರ ಮಾಡಿದ್ದು, ಸತತ 10ನೇ ಬಾರಿ ರೆಪೋದರದಲ್ಲಿ ಬದಲಾವಣೆಯಾಗಿಲ್ಲ.
ಸೋಮವಾರದಿಂದ ಮೂರು ದಿನಗಳ ಕಾಲ ನಡೆದ ಎಂಪಿಸಿ ಸಭೆಯಲ್ಲಿ ರೆಪೋ ದರ ಅಥವಾ ಬಡ್ಡಿದರ ಶೇ. 6.50ರಲ್ಲಿ ಮುಂದುವರೆಸುವಂತೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರವನ್ನು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಆರ್ಬಿಐನ ಆರು ಎಂಪಿಸಿ ಸದಸ್ಯರಲ್ಲಿ ಐವರು ಸದಸ್ಯರು ರೆಪೋ ದರ ಶೇ. 6.5ರಲ್ಲಿ ಮುಂದುವರಿಸಲು ನಿರ್ಧರಿಸಿದರು. ಎಂಎಸ್ಎಲ್ಆರ್ ಇತ್ಯಾದಿ ಇತರ ದರಗಳೂ ಯಥಾಸ್ಥಿತಿಯಲ್ಲಿ ಮುಂದುವರಿಯಲಿವೆ ಎಂದು ಶಕ್ತಿಕಾಂತದಾಸ್ ಹೇಳಿದ್ದಾರೆ.
ಹಣದುಬ್ಬರ ಏರಿಕೆಯಾಗುವ ಸಾಧ್ಯತೆ ಇರುವ ಹಿನ್ನೆಲೆ ಬಡ್ಡಿದರವನ್ನು ಅಧಿಕ ಮಟ್ಟದಲ್ಲೇ ಮುಂದುವರಿಸಲು ಆರ್ಬಿಐನ ಎಂಪಿಸಿ ತೀರ್ಮಾನಿಸಿದೆ. ಹಣದುಬ್ಬರ ಈ ಹಣಕಾಸು ವರ್ಷದಲ್ಲಿ ಶೇ. 4.5ರಷ್ಟು ಇರಬಹುದು ಎಂದು ಆರ್ಬಿಐ ಅಂದಾಜಿಸಿದೆ.