ಭಾರತದಲ್ಲಿ ತಯಾರಾಗುವ ಶೂಗಳಿಗೆ ವಿದೇಶದಲ್ಲಿ ಡಿಮ್ಯಾಂಡ್ ಹೆಚ್ಚಾಗಿದ್ದು, ರಷ್ಯಾ ದೇಶವು ತನ್ನ ಸೈನಿಕರಿಗಾಗಿ ಭಾರತದಿಂದ ಶೂಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಹೌದು, ಬಿಹಾರದ ಹಾಜಿಪುರದ ಕೈಗಾರಿಕಾ ಘಟಕದಲ್ಲಿ ತಯಾರಾಗುವ ಶೂಗಳ ಹೆಜ್ಜೆ ಸಪ್ಪಳ ರಷ್ಯಾದಲ್ಲಿ ಕೇಳಿಬರುತ್ತಿದೆ. ರಷ್ಯಾ ಸೈನಿಕರು ಆರಾಮ ಮತ್ತು ಕರ್ತವ್ಯಕ್ಕೆ ಈ ಶೂಗಳನ್ನೇ ಬಯಸುತ್ತಿದ್ದಾರೆ. ಯುದ್ಧಭೂಮಿಯಲ್ಲಿ, ಹಿಮದ ನೆಲದಲ್ಲಿ ಹೆಜ್ಜೆ ಹಾಕಲು ಹಾಜಿಪುರದಿಂದ ವಿಶೇಷವಾಗಿ ತಯಾರಿಸಿದ ಶೂಗಳು ರಷ್ಯಾ ದೇಶಕ್ಕೆ ರಫ್ತು ಆಗುತ್ತಿದೆ. ಇದು ಕೊರೆಯುವ ಚಳಿಯಲ್ಲೂ ಸೈನಿಕರನ್ನು ರಕ್ಷಿಸುವ ಸಾಮರ್ಥ್ಯವನ್ನು ಹೊಂದಿದೆ. ಶಿವ ಕುಮಾರ್ ರಾಯ್ ಎಂಬವರು ಕಾಂಪಿಟನ್ಸ್ ಎಕ್ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿ ಹುಟ್ಟುಹಾಕಿ ಅದರ ಮೂಲಕ ಹಾಜಿಪುರದಲ್ಲಿ ಸ್ಥಳೀಯ ಉದ್ಯೋಗವನ್ನು ಸೃಷ್ಟಿಸಲು ಮುಂದಾದರು. ಸುರಕ್ಷತಾ ಶೂಗಳನ್ನು ತಯಾರಿಸಿದರು. ಬಳಿಕ ಅವುಗಳನ್ನು ರಷ್ಯಾಗೆ ರಫ್ತು ಮಾಡಿದರು. ಸದ್ಯ ರಷ್ಯಾದ ಜೊತೆಗೆ ಯುರೋಪಿಯನ್ ಮಾರುಕಟ್ಟೆಗೆ ಈ ಶೂಗಳು ತಲುಪುತ್ತಿವೆ. ದೇಶಿಯ ಮಾರುಕಟ್ಟೆಗೂ ಸದ್ಯದಲ್ಲೇ ಬಿಡುಗಡೆ ಮಾಡಲು ಶಿವ ಕುಮಾರ್ ರಾಯ್ ಮುಂದಾಗಿದ್ದಾರೆ.
