ಬೆಂಗಳೂರು : ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ 11ನೇ ಸೀಸನ್ ಆರಂಭಗೊಂಡು ಎರಡು ವಾರಗಳಾಗುತ್ತ ಬಂದಿದ್ದು, ಸ್ಫರ್ಧಿಗಳ ನಡುವಿನ ಕಿತ್ತಾಟ, ತರಲೆ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಈ ಬಾರಿ ಸ್ವರ್ಗ-ನರಕ ಥೀಮ್ನಲ್ಲಿ ಕಾರ್ಯಕ್ರಮ ರೂಪುಗೊಂಡಿದ್ದು, ದಿನ ಕಳೆದಂತೆ ರೋಚಕತೆ ಹೆಚ್ಚಾಗುತ್ತಿದ್ದು, ಇದೀಗ ಬಿಗ್ ಬಾಸ್ ಮನೆಯಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಬಿಗ್ ಬಾಸ್ ಮನೆಯಲ್ಲಿ ಎಮರ್ಜೆನ್ಸಿ ಎಂಬ ಶೀರ್ಷಿಕೆಯಲ್ಲಿ ರಿಲೀಸ್ ಆಗಿರುವ ಪ್ರೋಮೋ ನೋಡುವುದಾದರೆ ಕ್ರೇನ್ ಮೂಲಕ ಮನೆ ಒಳಗೆ ಬಿಗ್ ಬಾಸ್ ಮನೆಯ ಸಿಬ್ಬಂದಿಗಳು ಎಂಟ್ರಿ ಕೊಟ್ಟಿದ್ದು, ಮನೆಯ ಒಳಗೆ ನುಗ್ಗಿ ನರಕದಲ್ಲಿರುವ ವಸ್ತುಗಳನ್ನೆಲ್ಲಾ ತೆಗೆದುಕೊಂಡು ಹೊಡೆದು ಹಾಕಿದ್ದಾರೆ. ಇದನ್ನು ನೋಡಿದ ಸ್ಫರ್ಧಿಗಳು ಒಂದು ಕ್ಷಣ ಆಘಾತಕ್ಕೆ ಒಳಗಾಗಿದ್ದು, ಯಾವ ಕಾರಣಕ್ಕೆ ಈ ರೀತಿ ಮಾಡಲಾಗುತ್ತಿದೆ ಎಂಬುದನ್ನು ತಿಳಿಯದೆ ನೋಡುತ್ತ ನಿಂತಿದ್ದಾರೆ.
