ಬೆಂಗಳೂರು: ಬಿಜೆಪಿಯ ಶಾಸಕ ಹಾಗೂ ಮಾಜಿ ಸಚಿವ ಕೆ. ಗೋಪಾಲಯ್ಯ ಸೋಮವಾರ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ. ಡಿಕೆಶಿ ಅವರ ಸದಾಶಿವನಗರ ನಿವಾಸಕ್ಕೆ ಕೆ. ಗೋಪಾಲಯ್ಯ ಭೇಟಿ ನೀಡಿ ಚರ್ಚೆ ನಡೆಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಬಜೆಟ್ ಅಧಿವೇಶನದ ವೇಳೆ ಮಾಜಿ ಕಾರ್ಪೋರೇಟರ್ ಪದ್ಮರಾಜ್ ತನಗೆ ಹಾಗೂ ತನ್ನ ಕುಟುಂಬಸ್ಥರಿಗೆ ಕೊಲೆ ಬೆದರಿಕೆ ಹಾಕಿದ್ದಾರೆಂದು ಸಚಿವ ಗೋಪಾಲಯ್ಯ ಹೇಳಿಕೆ ನೀಡಿದ್ದರು.
ಆತನ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಬಿಜೆಪಿ ನಾಯಕರಾದ ಎಸ್ ಸುರೇಶ್ ಕುಮಾರ್, ಆರ್. ಅಶೋಕ್ ಸಹ ಒತ್ತಾಯಿಸಿದ್ದರು. ಇದರೊಂದಿಗೆ ಲೋಕಸಭಾ ಚುನಾವಣೆಯೂ ಸಹ ಸಮೀಪದಲ್ಲಿರುವ ವೇಳೆ ವಿರೋಧ ಪಕ್ಷ ಹಾಗೂ ಆಡಳಿತ ಪಕ್ಷದ ನಾಯಕರ ಭೇಟಿ ಕುತೂಹಲಕ್ಕೆ ಕಾರಣವಾಗಿದೆ. ಸಚಿವ ಗೋಪಾಲಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇದುವರೆಗೂ ಭೇಟಿಯ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.