ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರಗೆ ಕಾನೂನು ಕುಣಿಕೆ ಬಿಗಿಯಾಗಲಿದ್ದು ಇ.ಡಿ ಅಧಿಕಾರಿಗಳು ಬಂಧಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ನಿನ್ನೆಯಷ್ಟೇ ಎಸ್ಐಟಿ ಅಧಿಕಾರಿಗಳು ವಿಚಾರಣೆ ಒಳಗಾಗಿದ್ದ ನಾಗೇಂದ್ರ, ಇಂದು ವಿಚಾರಣೆ ಹಾಜರಾಗುವಂತೆ ಎಸ್ಐಟಿ ಸೂಚಿಸಿತ್ತು. ಇದರ ಬೆನ್ನಲೇ ಬೆಳ್ಳಂಬೆಳ್ಳಗೆ ಬೆಂಗಳೂರಿನ ಡಾರ್ಲಸ್ ಕಾಲೋನಿಯಲ್ಲಿರುವ ನಿವಾಸ ಹಾಗೂ ಬಳ್ಳಾರಿ ಗ್ರಾಮಾಂತರದಲ್ಲಿ ಇರುವ ಮನೆ ಸೇರಿದಂತೆ ಹಲವಡೆ ಇ.ಡಿ.ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸುತ್ತಿದ್ದಾರೆ. 94.73 ಕೋಟಿ ರೂ.ಅವ್ಯವಹಾರ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣ ಆಧರಿಸಿ ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಯೂನಿಯನ್ ಬ್ಯಾಂಕ್ ಅಧಿಕಾರಿಗಳು ಹಣ ದುರ್ಬಳಕೆ ಆರೋಪ ಸಂಬಂಧ ಸಿಬಿಐಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಪರ್ಯಾಯವಾಗಿ ತನಿಖೆ ಕೈಗೆತ್ತಿಕೊಂಡಿದ್ದ ಸಿಬಿಐ ತನಿಖೆಯಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ಹಣ ವರ್ಗಾವಣೆ ಹಾಗೂ ಹವಾಲಾ ದಂಧೆ ಹಾಗೂ ವ್ಯಾಪಕವಾಗಿ ಭ್ರಷ್ಟಾಚಾರವೆಸಗಿರುವುದು ಕಂಡುಬಂದಿತ್ತು. ಅಕ್ರಮ ಹಣ ವರ್ಗಾವಣೆ ಬಗ್ಗೆ ಇ.ಡಿ ಅಧಿಕಾರಿಗಳಿಗೆ ಸಿಬಿಐ ಪತ್ರ ಬರೆದಿತ್ತು. ಇದರಂತೆ ಇಂದು ಬೆಳ್ಳಂಬೆಳ್ಳಗೆ ಬೆಂಗಳೂರು,ರಾಯಚೂರು ಹಾಗೂ ಬಳ್ಳಾರಿ ಸೇರಿದಂತೆ 15ಕ್ಕಿಂತ ಹೆಚ್ಚು ದಾಳಿ ಮಾಡಿರುವ ಅಧಿಕಾರಿಗಳು ಪರಿಶೀಲನೆ ಚುರುಕುಗೊಳಿಸಿದ್ದಾರೆ. ಇ.ಡಿ ವಶದಲ್ಲಿರುವ ಹರೀಶ್, ಮಾಜಿ ಸಚಿವರ ಪರವಾಗಿ ಹಣದ ವಹಿವಾಟಿನಲ್ಲಿ ತೊಡಗಿಕೊಂಡಿದ್ದು ಆರೋಪಿ ಸತ್ಯನಾರಾಯಣ್ ವರ್ಮಾನಿಂದ ಕೋಟ್ಯಂತರ ರೂಪಾಯಿ ಪಡೆದ ಆರೋಪ ಈತನ ಮೇಲಿದೆ. ಅಲ್ಲದೆ ಸಚಿವರ ಪರವಾಗಿ ಹವಾಲಾ ಹಣ ಹಾಗೂ ಚಿನ್ನದ ಬಿಸ್ಕಟ್ ಪಡೆದಿದ್ದ ಎನ್ನಲಾಗಿದ್ದು ಈ ಮೂಲಕ ಪರೋಕ್ಷವಾಗಿ ನಾಗೇಂದ್ರ ಅವರು ಕೋಟ್ಯಂತರ ರೂಪಾಯಿ ಹಣ ಪಡೆದುಕೊಂಡಿರುವ ಗುಮಾನಿ ಹಿನ್ನೆಲೆಯಲ್ಲಿ ಅಧಿಕಾರಿಗಳು ಅವರ ಮನೆಯಲ್ಲಿ ಶೋಧಕಾರ್ಯ ಚುರುಕುಗೊಳಿಸಿದ್ದಾರೆ. ನಾಗೇಂದ್ರ ಬಳಸುತ್ತಿದ್ದ ಮೊಬೈಲ್, ಕಂಪ್ಯೂಟರ್ ಸೇರಿದಂತೆ ಇನ್ನಿತರ ಕಾಗದ ಪತ್ರಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ ನಾಗೇಂದ್ರ ಬಳಸುತ್ತಿದ್ದ ಬ್ಯಾಂಕ್ ಖಾತೆಗಳ ಹಣದ ವಹಿವಾಟಿನ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.
![](https://bcsuddi.com/wp-content/uploads/2025/02/WhatsApp-Image-2025-02-05-at-6.18.34-PM.jpeg)