ಬೇಸಿಗೆಯ ಕಣ್ಣಿನ ಸಮಸ್ಯೆಗಳಿಂದ ದೂರವಿರಲು, ಕಣ್ಣಿನ ಆರೈಕೆಗೆ ಪೂರ್ವಭಾವಿ ಕ್ರಮ ಕೈಗೊಳ್ಳಬೇಕು. ಸುಡು ಬಿಸಿಲಿಗೆ ಕಣ್ಣುಗಳು ತೇವಾಂಶವನ್ನು ಕಳೆದುಕೊಂಡು ಮಡ್ರಾಸ್ ಐ, ಕಾಮಾಲೆ, ಕಣ್ಣನಲ್ಲಿ ನವೆ, ಅಲರ್ಜಿ, ಕಣ್ಣಿನಲ್ಲಿ ಆಗಾಗ ನೀರು ಸುರಿಯುತ್ತಲೇ ಇರುವುದು, ಕಿರಿಕಿರಿ ಅನುಭವ ಇಲ್ಲವೇ ಕಣ್ಣಿನೊಳಗೆ ಚುಚ್ಚಿದಂತಾಗುವುದು.
ಹೀಗೆ ಹಲವು ರೀತಿಯ ಕಣ್ಣಿನ ಸಮಸ್ಯೆಗಳು ಎದುರಾಗುತ್ತವೆ. ದಿನೇ ದಿನೆ ತಾಪಮಾನ ಏರಿಕೆಯಾಗುತ್ತಿದ್ದು, ಎಲ್ಲೆಡೆ ಬಿಸಿಯ ವಾತಾವರಣದಿಂದ ಜನರ ಆರೋಗ್ಯ ಸಮಸ್ಯೆ ಕೂಡಾ ಹೆಚ್ಚುತ್ತಿದೆ. ಇಂಥಾ ಸಂದರ್ಭದಲ್ಲಿ ಕಣ್ಣಿನ ಸಮಸ್ಯೆ ಹೆಚ್ಚುವ ಸಾಧ್ಯತೆ ಇದೆ.ಕಣ್ಣಿನ ಆರೋಗ್ಯಕ್ಕೂ, ಹೆಚ್ಚು ನೀರು ಕುಡಿಯುವುದಕ್ಕೂ ಸಂಬಂಧವಿದೆ. ಹೀಗಾಗಿ ದ್ರವರೂಪದ ಆಹಾರವನ್ನು ಸೇವನೆ ಹೆಚ್ಚಿಸಿ. ಹೆಚ್ಚು ನೀರು ಕುಡಿಯಿರಿ. ಬೇಸಿಗೆಯಲ್ಲಿ ಕಣ್ಣುಗಳ ಡ್ರೈ ಆಗುವ ಕಾರಣದಿಂದ ಹೆಚ್ಚು ನೀರು ಕುಡಿಯುದರೆ ದೇಹವು ಆರೋಗ್ಯಕರ ಪ್ರಮಾಣದ ಕಣ್ಣೀರಿನ ಉತ್ಪಾದನೆಗೆ ನೆರವಾಗುತ್ತದೆ. ಸ್ವಿಮ್ಮಿಂಗ್, ಕ್ರೀಡೆ ಅಥವಾ ಹೊರಾಂಗಣದ ಕೆಲಸ ಮಾಡುವಾಗ ಸನ್ ಗ್ಲಾಸ್ ಗಳನ್ನು ಬಳಕೆ ಮಾಡಿ.
ಈ ಕನ್ನಡಕಗಳು ನಿಮ್ಮ ಕಣ್ಣುಗಳಿಗೆ ಧೂಳು, ರಾಸಾಯನಿಕ ಮತ್ತು ಇತರೆ ಹಾನಿಕಾರಕ ವಸ್ತುಗಳಿಂದ ರಕ್ಷಣೆ ಮಾಡುತ್ತವೆ. ಮುಖಕ್ಕೆ ಕ್ರೀಮ್ ಹಚ್ಚುವುದು ಸಾಮಾನ್ಯ. ಇದನ್ನು ಕಣ್ಣುಗಳು ಮತ್ತು ಕಣ್ಣುರೆಪ್ಪೆಯ ಸುತ್ತಲೂ ಹಚ್ಚುವಾಗ ಹೆಚ್ಚು ಜಾಗರೂಕರಾಗಿರಬೇಕು. ಎಸ್ಪಿಎಫ್ ಅಧಿಕವಿರುವ ಸನ್ಸ್ಕ್ರೀನ್ಗಳು ಕಣ್ಣಿನ ಒಳ ಹೋದರೆ ಸಾಮಾನ್ಯವಾಗಿ ಕಣ್ಣುಗಳ ಅಸ್ವಸ್ಥತೆಗೆ ಕಾರಣವಾಗುತ್ತವೆ. ಇದರಿಂದ ಕಣ್ಣಿಗೆ ಶಾಶ್ವತವಾಗಿ ಯಾವುದೇ ಹಾನಿಯಾಗಲ್ಲ. ಆದರೆ ಕೆಲವು ದಿನಗಳವರೆಗೆ ನೋವು ಇರಬಹುದು. ಅನಗತ್ಯವಾಗಿ ಮಧ್ಯಾಹ್ನ ಸಮಯದ ಪ್ರಖರ ಬಿಸಿಲಿನ ವೇಳೆ ಹೊರಗೆ ಹೋಗುವುದನ್ನು ನಿರ್ಬಂಧಿಸಿ. ಸೂರ್ಯನ ಪ್ರಕಾಶಮಾನವಾದ ಯುವಿ ಕಿರಣಗಳು ಹೆಚ್ಚು ತೀಕ್ಷ್ಣವಾಗಿ ನಾಟುತ್ತದೆ. ಅದರಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸುವುದು ಅತ್ಯಗತ್ಯ.
ತೊಳೆಯದ ಕೈಗಳಿಂದ ನಿಮ್ಮ ಕಣ್ಣುಗಳನ್ನು ಉಜ್ಜುವುದರಿಂದ ದೂರವಿರಿ, ಏಕೆಂದರೆ ಇದರಿಂದ ಬ್ಯಾಕ್ಟೀರಿಯಾಗಳು ಕಣ್ಣುಗಳಿಗೆ ಹೋಗುವ ಸಾಧ್ಯತೆಗಳಿರುತ್ತವೆ. ಯಾವುದೇ ದೃಷ್ಟಿ ಸಮಸ್ಯೆಗಳು ಇಲ್ಲದಿದ್ದರೂ ಸಹ ವರ್ಷಕ್ಕೊಮ್ಮೆಯಾದರೂ ವೈದ್ಯರಲ್ಲಿ ಕಣ್ಣುಗಳ ಪರೀಕ್ಷೆ ಮಾಡಿಸಿಕೊಳ್ಳಿ. ಕಣ್ಣಿನ ಪರೀಕ್ಷೆಗಳಿಂದ ಗ್ಲುಕೋಮಾ, ಕಣ್ಣಿನ ಪೊರೆ, ಡಯಾಬಿಟಿಕ್ ರೆಟಿನೋಪತಿ ಮತ್ತು ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್ನಂತಹ ಸಮಸ್ಯೆಗಳ ಆರಂಭಿಕ ಚಿಹ್ನೆಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತವೆ, ಇದು ಸಕಾಲಿಕ ಚಿಕಿತ್ಸೆಗೆ ಅನುವು ಮಾಡಿಕೊಡುತ್ತದೆ.