ನವದೆಹಲಿ: ಭಾರತದಲ್ಲಿ ನಿರುದ್ಯೋಗ ಎಂಬ ರೋಗವು ಸಾಂಕ್ರಮಿಕ ರೂಪ ತಾಳಿದೆ, ಬಿಜೆಪಿ ಆಡಳಿತ ಇರುವ ರಾಜ್ಯಗಳು ಅವುಗಳ ಕೇಂದ್ರಸ್ಥಾನಗಳಾಗಿವೆ ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಗುಜರಾತ್ನ ಖಾಸಗಿ ಕಂಪನಿಯೊಂದರಲ್ಲಿ 40 ಖಾಲಿ ಹುದ್ದೆಗಳಿಗೆ ನಡೆದ ಸಂದರ್ಶನಕ್ಕೆ 800ಕ್ಕೂ ಅಧಿಕ ಆಕಾಂಕ್ಷಿಗಳು ಆಗಮಿಸಿದ ಪರಿಣಾಮ ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಘಟನೆಯನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಅವರು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಸಾಮಾನ್ಯ ಕೆಲಸವೊಂದಕ್ಕೆ ಭಾರತ ಭವಿಷ್ಯವು ಸರತಿ ಸಾಲಿನಲ್ಲಿ ನಿಲ್ಲುತ್ತಿರುವುದು ಮೋದಿಯ ಅಮೃತ ಕಾಲದ ನಿಜಸ್ಥಿತಿ ಎಂದು ಬರೆದುಕೊಂಡಿದ್ದಾರೆ.
ಇನ್ನು ಈ ವಿಡಿಯೋವನ್ನು ತನ್ನ ಸಾಮಾಜಿಕ ತಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡು ಪೋಸ್ಟ್ ಮಾಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಅವರು, ಕಳೆದ 22ವರ್ಷದಲ್ಲಿ ಗುಜರಾತ್ನಲ್ಲಿ ಬಿಜೆಪಿ ಮಾಡಿದ ಮೋಸದ ಮಾದರಿ’ಗೆ ಸಾಕ್ಷ್ಯ ಇದು. ಕಳೆದ 10 ವರ್ಷದಲ್ಲಿ ಮೋದಿ ಸರ್ಕಾರವು ಯುವಕರ ಉದ್ಯೋಗವನ್ನು ಕಿತ್ತುಕೊಂಡು, ಅವರ ಭವಿಷ್ಯವನ್ನು ಹಾಳು ಮಾಡಿರುವುದಕ್ಕೂ ಈ ವಿಡಿಯೊ ಸಾಕ್ಷಿ ಎಂದು ಹೇಳಿದ್ದಾರೆ.
ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಬಿಜೆಪಿ ಭರವಸೆ ನೀಡಿತ್ತು. ಆದರೆ ಮಾಡಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆ, ನೇಮಕಾತಿ ಹಗರಣ, ಶಿಕ್ಷಣ ಮಾಫಿಯಾ, ಸರ್ಕಾರಿ ಹುದ್ದೆಗಳನ್ನು ಹಲವು ವರ್ಷಗಳು ಖಾಲಿ ಇರಿಸಿದ್ದು, ಉದ್ದೇಶಪೂರ್ವಕವಾಗಿ ಎಸ್ಸಿ/ ಎಸ್ಟಿ/ ಒಬಿಸಿ / ಇಡಬ್ಲ್ಯುಎಸ್ ಹುದ್ದೆಗಳನ್ನು ಭರ್ತಿ ಮಾಡದೇ ಇರುವುದು, ಅಗ್ನಿವೀರ್ನಂತಹ ಯೋಜನೆಗಳ ಮೂಲಕ ಗುತ್ತಿಗೆ ಆಧಾರದಲ್ಲಿ ನೇಮಕಾತಿ. ಇದರಿಂದ ಕೋಟ್ಯಾಂತರ ಯುವಕರು ಕೆಲಸಕ್ಕಾಗಿ ಬಾಗಿಲಿನಿಂದ ಬಾಗಿಲಿಗೆ ಅಲೆಯಬೇಕಾದ ಪರಿಸ್ಥಿತಿ ಬಂದಿದೆ ಎಂದು ಅವರು ಬರೆದುಕೊಂಡಿದ್ದಾರೆ.
 
				 
         
         
         
															 
                     
                     
                     
                     
                    


































 
    
    
        