ಮಂಗಳೂರು: ಅನಾರೋಗ್ಯದ ನಡುವೆಯೂ ತಮ್ಮ ನಾಗರಿಕ ಕರ್ತವ್ಯದಲ್ಲಿ ಅಚಲ ಬದ್ಧತೆಯನ್ನು ಮಾಜಿ ಸೇನಾಧಿಕಾರಿ ಪ್ರದರ್ಶಿಸಿ ಕೊನೆಯುಸಿರೆಳೆದ ಘಟನೆ ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ನಡೆದಿದೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಸೇನಾಧಿಕಾರಿ ಹಾಗೂ ಮಲೇರಿಯಾ ನಿರ್ಮೂಲನಾ ವಿಭಾಗದ ಇನ್ಸ್ಪೆಕ್ಟರ್ ಪ್ರಭು ಅವರು ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ತಮ್ಮ ಅನಾರೋಗ್ಯದ ನಡುವೆ, ಪ್ರಭು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ನಿರ್ಧರಿಸಿದ್ದರು. ವಿಶೇಷವಾಗಿ 85 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಮನೆ ಮತದಾನದ ಅವಕಾಶವನ್ನು ಒದಗಿಸಲಾಗಿದೆ. ಇದರ ಪ್ರಯೋಜನ ಪಡೆದ ಪ್ರಭು ಅವರು ಮನೆಯಲ್ಲೇ ಮತದಾನ ಮಾಡಿದ್ದರು.
ವೈದ್ಯರ ಅನುಮತಿ ಪಡೆದ ಅವರು ನಿನ್ನೆ ನಾಗರಿಕ ಕರ್ತವ್ಯ ಪೂರೈಸಲು ಸ್ವಲ್ಪ ಸಮಯದವರೆಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಇಂದು ಆಸ್ಪತ್ರೆಗೆ ದಾಖಲಾದ ನಂತರ ಪ್ರಭು ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿದ್ದರಿಂದ ಮೃತಪಟ್ಟಿದ್ದಾರೆ.
ಮಾಧವ ಪ್ರಭು ಅವರು ಸೈನ್ಯಕ್ಕೆ ಸೇರ್ಪಡೆಯಾಗುವ ಪೂರ್ವದಲ್ಲಿ ಮಲೇರಿಯಾ ನಿರ್ಮೂಲನ ವಿಭಾಗದ ಇನ್ಸ್ಪೆಕ್ಟರ್ ಆಗಿದ್ದರು. ಸೇನೆಯಿಂದ ನಿವೃತ್ತರಾದ ಬಳಿಕ ಪೂರ್ಣಾನಂದ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷರಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಪುತ್ರನನ್ನು ಅಗಲಿದ್ದಾರೆ.
 
				 
         
         
         
															 
                     
                     
                     
                     
                    


































 
    
    
        