ಮುಂಬೈ: ದೇಶದ ವಾಣಿಜ್ಯ ನಗರ ಮುಂಬೈ ಮಹಾಮಳೆಗೆ ಮುಳುಗಿದೆ. ಕೇವಲ 6 ಗಂಟೆಯ ಅವಧಿಯಲ್ಲಿ 300 ಮಿ.ಮೀ ಮಳೆಯಾಗಿದ್ದು, ಮುಂಬೈ ನಗರದ ಹಲವೆಡೆಯಲ್ಲಿ ನೀರು ನಿಂತಿದೆ. ರಸ್ತೆ, ರೈಲು, ವಿಮಾನ ಸಂಚಾರದಲ್ಲಿ ವ್ಯತ್ಯಯವಾಗಿದೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ 50ಕ್ಕೂ ಹೆಚ್ಚು ವಿಮಾನಗಳ ಸೇವೆ ರದ್ದಾಗಿದೆ.
ಮುಂಬೈ, ಥಾಣೆ ಪಾಲ್ಘರ್ ಮತ್ತು ಕೊಂಕಣ ಬೆಲ್ಟ್ಗೆ ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ನೀಡಿದೆ. ವಿಕ್ರೋಲಿಯ ವೀರ್ ಸಾವರ್ಕರ್ ಮಾರ್ಗ್ ಮುನ್ಸಿಪಲ್ ಸ್ಕೂಲ್ ಮತ್ತು ಎಂಸಿಎಂಸಿಆರ್ ಪೊವಾಯಿಯಲ್ಲಿ ಕಳೆದ 24 ಗಂಟೆಗಳಲ್ಲಿ 315 ಮಿ.ಮೀ ಗಿಂತಲೂ ಹೆಚ್ಚು ಮಳೆ ದಾಖಲಾಗಿದೆ.
ಹಲವಾರು ವಿಮಾನಯಾನ ಸಂಸ್ಥೆಗಳು ವಿಮಾನ ನಿಲ್ದಾಣಕ್ಕೆ ಬರುವ ಮೊದಲು ಫ್ಲೈಟ್ ಸ್ಟೇಟಸ್ ಚೆಕ್ ಮಾಡುವಂತೆ ಪ್ರಯಾಣಿಕರಲ್ಲಿ ಮನವಿ ಮಾಡಿವೆ. ಮುಂಬೈಯ ಹಲವು ಪ್ರದೇಶಗಳಲ್ಲಿ ಸೊಂಟದವರೆಗೆ ನೀರು ನಿಂತಿದೆ. ಮುಂಬೈ ನಗರದ ಎಲ್ಲಾ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಸಮುದ್ರ ಅಲೆಗಳ ಮಟ್ಟ ಏರಿಕೆ ಆಗುತ್ತಿದ್ದು, ಮಧ್ಯಾಹ್ನ 2 ಗಂಟೆಯ ವೇಳೆಗೆ 4.4 ಮೀಟರ್ ಎತ್ತರಕ್ಕೆ ಏರುವ ಸಾಧ್ಯತೆಯಿದೆ. ಹೀಗಾಗಿ ಯಾರೂ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ದೂರದ ಊರುಗಳಿಗೆ ತೆರಳುವ ರೈಲುಗಳಿಗೆ ಸಮಸ್ಯೆಯಾಗಿದೆ. ಹಲವು ರೈಲುಗಳ ಸಂಚಾರವನ್ನು ಭಾರತೀಯ ರೈಲ್ವೇ ರದ್ದುಗೊಳಿಸಿದೆ. ಇಂದು ಮತ್ತೆ ಮುಂಬೈ ಮಹಾನಗರದಲ್ಲಿ ಭಾರೀ ಮಳೆಯಾಗಲಿದೆ ಎಂದು ಐಎಂಡಿ ಎಚ್ಚರಿಕೆ ನೀಡಿದೆ.